copy paste disbler

Thursday, April 2, 2020

ಈಶ್ವರನ ಸೃಷ್ಟಿಕ್ರಿಯೆಗಳ ಖಂಡನೆ

ಈಶ್ವರನ ಸೃಷ್ಟಿಕ್ರಿಯೆಗಳ ಖಂಡನೆ

ಮಹಾಪುರಾಣದಲ್ಲಿ ಲೋಕ, ದೇಶ, ಪಟ್ಟಣ, ರಾಜ್ಯ, ತೀರ್ಥ, ದಾನ, ತಪಸ್ಸು, ಗತಿಗಳು, ಫಲ ಇತ್ಯಾದಿಗಳ ಬಗ್ಗೆ ವರ್ಣಿಸಲಾಗಿದೆ. ಅವುಗಳ ಬಗ್ಗೆ ಸಂಕ್ಷೇಪವಾಗಿ ಅರಿಯೋಣ.

ವಿಸ್ತಾರವಾಗಿ ಲೋಕದ ಹೆಸರು, ದಿಕ್ಕುಗಳ ವರ್ಣನೆ ವರ್ಣಿಸುವುದಕ್ಕೆ ಲೋಕಾಖ್ಯಾನವೆನ್ನುವರು;
ಲೋಕದಲ್ಲಿನ ದೇಶ, ಪರ್ವತ, ದ್ವೀಪ, ಸಮುದ್ರ ಇತ್ಯಾದಿಗಳ ವರ್ಣನೆಯನ್ನು ದೇಶಾಖ್ಯಾನವೆನ್ನುವರು;
ಭರತ ದೇಶದಲ್ಲಿನ ರಾಜಧಾನಿಗಳ ವರ್ಣನೆಯನ್ನು ಪುರಾಖ್ಯಾನವೆನ್ನುವರು;
ಈ ದೇಶದಲ್ಲಿನ ಅನೇಕ ನಗರಗಳನ್ನಾಳುತ್ತಿರುವ ರಾಜರುಗಳ ವರ್ಣನೆಯನ್ನು ರಾಜಾಖ್ಯಾನವೆನ್ನುವರು;
ತೀರ್ಥಕ್ಷೇತ್ರಗಳ ವರ್ಣನೆಯನ್ನು ತೀರ್ಥಾಖ್ಯಾನವೆನ್ನುವರು;
ನರಕಾದಿಭೇದದಿಂದ ಗತಿಗಳು ನಾಲ್ಕು. ಈ ಗತಿಗಳ ವರ್ಣನೆಯನ್ನು ಗತ್ಯಾಖ್ಯಾನವೆನ್ನುವರು;
ಪ್ರಾಣಿಗಳಿಗುಂಟಾಗುವ ಪಾಪಪುಣ್ಯಗಳ ವರ್ಣನೆಯನ್ನು ಫಲಾಖ್ಯಾನವೆನ್ನುವರು;

ಜೀವ ಇರುವ, ಇಲ್ಲದಿರುವ ಪದಾರ್ಥಗಳು ಯಾವುದರಲ್ಲಿ ಕಾಣುವುದೋ ಅದೇ ಲೋಕ. ಕ್ಷೇತ್ರವೆಂಬ ಪದವು 'ಕ್ಷೀ' ಧಾತುವಿನಿಂದ ಉಂಟಾಗಿದೆ. ಜೀವ ಮೊದಲಾದ ಎಲ್ಲ ಪದಾರ್ಥಗಳೂ ಈ ಲೋಕದಲ್ಲಿರುವುದರಿಂದ ಲೋಕವನ್ನು ಕ್ಷೇತ್ರವನ್ನಾಗಿಯೂ ಪರಿಗಣಿಸಬಹುದು. ಈ ಲೋಕವು ಅನಂತಾಕಾಶದ ಮಧ್ಯದಲ್ಲಿದೆ. ಜೈನ ಮತಾನುಯಾಯಿಗಳು ಸೃಷ್ಟಿವಾದವನ್ನು ಈ ಕೆಳಗಿನ ವಾದದ ಮೂಲಕ ನಿರಾಕರಿಸುತ್ತಾರೆ:

ಸೃಷ್ಟಿಯಿಂದ ಬಹಿರ್ಭೂತನಾದ ಜಗತ್ಕರ್ತನು ಎಲ್ಲಿದ್ದುಕೊಂಡು ಲೋಕವನ್ನು ಸೃಷ್ಟಿಸುವನು? ನಿರಾಧಾರನೂ ಹಾಗೂ ನಿರ್ವಿಕಾರನೂ ಆದ ಸೃಷ್ಟಿಕರ್ತನು ಈ ಜಗತ್ತನ್ನು ಸೃಷ್ಟಿಸಿ ಎಲ್ಲಿಡುವನು?

ಸಮಸ್ತಚರಾಚಾರಪದಾರ್ಥಗಳನ್ನು ಒಳಗೊಂಡಿರುವ ಈ ವಿಶ್ವವನ್ನು ರಚಿಸುವುದರಲ್ಲಿ ಸಮರ್ಥನಾದವನು ಯಾರೂ ಇಲ್ಲ. ಶರೀರರಹಿತನಾದ ಈಶ್ವರನಿಂದ ಮೂರ್ತಪದಾರ್ಥಗಳ ಸೃಷ್ಟಿಯಾಗುವುದು ಅಸಂಭವ.

ಸೃಷ್ಟಿಕರ್ತನು ಬೇರೆ ಸಲಕರಣೆಗಳಿಲ್ಲದೆ ಪ್ರಪಂಚವನ್ನು ಹೇಗೆ ಸೃಷ್ಟಿಸುವನು? ಮೊದಲು ಸಲಕರಣೆಗಳನ್ನು ಸೃಷ್ಟಿಸಿ ನಂತರ ಲೋಕಸೃಷ್ಟಿ ಮಾಡುತ್ತಾನೆಂದಲ್ಲಿ ಆ ಸಲಕರಣೆಗಳನ್ನು ಯಾವ ಸಲಕರಣೆಯಿಂದ ಸೃಷ್ಟಿಸಿದನು? ಹೀಗೇ ಪ್ರಶ್ನಿಸುತ್ತಾ ಹೋದರೆ ಅದೇ ಉತ್ತರವನ್ನು ಹೇಳುತ್ತಾ ಯಾವ ವ್ಯವಸ್ಥೆಯೂ ಆಗದೆ ಅನವಸ್ಥಾದೋಷವು ಆಗುವುದು.

ಆ ಸಲಕರಣೆಗಳು ಸ್ವಭಾವದಿಂದಲೇ ಸಿದ್ಧವಾಗಿತ್ತೆಂದರೆ ಅದರಂತೆ ಲೋಕವೂ ಸ್ವಭಾವದಿಂದ ಸಿದ್ಧವಾಗಿತ್ತು ಎಂಬುದು ಸಿದ್ಧವಾಗುವುದು. ಸೃಷ್ಟಿಕರ್ತನು ಹೇಗೆ ಅನಾದಿಕಾಲದಿಂದಲೂ ಸ್ವಭಾವದಿಂದ ಸಿದ್ಧನಾಗಿದ್ದಾನೆ ಎಂದು ಹೇಳುತ್ತೀರೋ ಹಾಗೆಯೇ ಪ್ರಪಂಚವೂ ಅನಾದಿಕಾಲದಿಂದಲೂ ಸ್ವಭಾವದಿಂದ ಸಿದ್ಧವಾಗಿರುವುದು. ಅದಕ್ಕೊಬ್ಬ ಸೃಷ್ಟಿಕರ್ತನನ್ನು ಏಕೆ ಮಾಡಬೇಕು?

ಸಾಮಗ್ರಿಗಳಿಲ್ಲದಿದ್ದರೂ ಸ್ವತಂತ್ರನಾದ ಈಶ್ವರನು ತನ್ನ ಇಚ್ಛಾಮಾತ್ರದಿಂದ ಪ್ರಪಂಚವನ್ನು ಸೃಷ್ಟಿಸುತ್ತಾನೆ ಎಂದು ಹೇಳುವ ಪಕ್ಷದಲ್ಲಿ ಈ ಯುಕ್ತಿಶೂನ್ಯವಾದ ಇಚ್ಛಾಮಾತ್ರ ಕಥನವನ್ನು ಯಾರು ನಂಬುವರು? ಈಶ್ವರೇಚ್ಛೆಯು ನಿತ್ಯವೋ ಅನಿತ್ಯವೋ? ನಿತ್ಯವಾಗುವ ಪಕ್ಷದಲ್ಲಿ ಯಾವಾಗಲೂ ಸೃಷ್ಟಿಯಾಗುತ್ತಿರಬೇಕು. ಪ್ರಳಯವೂ ಆಗಬಾರದು. ಮಧ್ಯದಲ್ಲಿ ಪ್ರಳಯವಾದರೆ ನಿತ್ಯವಾದ ಇಚ್ಛೆಗೆ ಭಂಗ ಬಂದಂತಾಯಿತು. ಭಂಗವಾಗದಿರುವ ಪಕ್ಷದಲ್ಲಿ ಸೃಷ್ಟಿ- ಪ್ರಳಯಗಳೆರಡೂ ಒಂದೇ ಕಾಲದಲ್ಲಿ ಆಗಬೇಕಾದೀತು. ಆಗ ಸ್ವಭಾವಸಂಕರದೋಷಪ್ರಸಂಗವು ಬರುವುದು. ಈಶ್ವರೇಚ್ಛೆಯು ಅನಿತ್ಯವಾಗುವ ಸಂದರ್ಭದಲ್ಲಿ ಅದು ಉಂಟಾಗುವುದಕ್ಕೆ ಕಾರಣವು ಯಾವುದೆಂದು ಹೇಳಬೇಕು. ಈಶ್ವರೇಚ್ಛೆಯು ಈಶ್ವರನಿಂದ ಭಿನ್ನವಾಗಿದೆಯೋ? ಅಭಿನ್ನವಾಗಿದೆಯೋ? ಭಿನ್ನವಾಗಿರುವ ಪಕ್ಷದಲ್ಲಿ ಈಶ್ವರನದೇ ಇಚ್ಚೆಯೆಂದು ಹೇಳಲಾಗುವುದಿಲ್ಲ. ಭಿನ್ನತ್ವವು ಎರಡರಲ್ಲಿಯೂ ಸಮಾನವಾಗಿದೆ. ಈಶ್ವರನಿಂದ ಇಚ್ಛೆಯು ಅಭಿನ್ನವಾಗಿರುವ ಪಕ್ಷದಲ್ಲಿ ಈಶ್ವರನಿಗೂ ಅನಿತ್ಯಪ್ರಸಂಗವು ಬರುವುದು. ಅಶರೀರನು ಇಚ್ಛಾಮಾತ್ರದಿಂದ ಕಾರ್ಯವನ್ನು ಮಾಡುತ್ತಾನೆಂಬುದಕ್ಕೆ ಯಾವ ದೃಷ್ಟಾಂತವೂ ಇಲ್ಲ. ಆದುದರಿಂದ ಇಚ್ಛಾಮಾತ್ರದಿಂದ ಪ್ರಪಂಚವನ್ನು ಸೃಷ್ಟಿಸುವುದು ಅಸಂಭವ.

ಕೃತಕೃತ್ಯನಾದ ಈಶ್ವರನಿಗೆ ಜಗತ್ತನ್ನು ನಿರ್ಮಿಸಬೇಕೆಂಬ ಇಚ್ಛೆಯು ಹೇಗೆ ಸಂಭವಿಸುತ್ತದೆ? ಕೃತಕೃತ್ಯನಿಗೆ ಯಾವ ಇಚ್ಛೆಯೂ ಉಂಟಾಗುವುದಿಲ್ಲ. ಕೃತಾರ್ಥನಲ್ಲದಿರುವ ಪಕ್ಷದಲ್ಲಿ, ಕುಂಬಾರನಂತೆ ಜಗತ್ತನ್ನು ನಿರ್ಮಿಸುವುದಕ್ಕೆ ಸಮರ್ಥನಾಗುವುದಿಲ್ಲ. ಆದ್ದರಿಂದಲೇ ಸರ್ವಶಕ್ತಿವಂತನೂ ಅಲ್ಲ.

ಅಮೂರ್ತನೂ ಕ್ರಿಯಾರಹಿತನೂ ವ್ಯಾಪಕನೂ ಆದ ಈಶ್ವರನು ಜಗತ್ತನ್ನು ಹೇಗೆ ಸೃಷ್ಟಿಸುವನು? ವಿಕಾರರಹಿತವಾದ ಈಶ್ವರನಿಗೆ ಪ್ರಪಂಚವನ್ನು ಸೃಷ್ಟಿಸಬೇಕೆಂಬ ಇಚ್ಛೆ ಉಂಟಾಗುವುದೂ ಅಸಂಗತ. ಇಚ್ಛೆ ಉಂಟಾದರೆ ಈಶ್ವರನಲ್ಲಿ ವಿಕಾರವು ಸಿದ್ಧವಾಗುವುದು.

"ತುಷ್ಯತು ದುರ್ಜನಃ" ಎಂಬ ನ್ಯಾಯದಿಂದ ಈಶ್ವರನು ಜಗತ್ತನ್ನು ಸೃಷ್ಟಿಸುತ್ತಾನೆಂದು ಒಪ್ಪಿಕೊಂಡರೂ ಹಾಗೆ ಪ್ರಪಂಚವನ್ನು ಸೃಷ್ಟಿಸುವುದರಿಂದ ಅವನಿಗಾಗುವ ಪ್ರಯೋಜನವೇನು ಎಂದು ವಿಚಾರ ಮಾಡಬೇಕು. ಲೋಕದಲ್ಲಿ ಮೂರ್ಖನು ಕೂಡ ಪ್ರಯೋಜನವಿಲ್ಲದೆ ಯಾವ ಕಾರ್ಯದಲ್ಲಿಯೂ ಪ್ರವರ್ತಿಸುವುದಿಲ್ಲ. ಈಶ್ವರನಿಗೆ ಪ್ರಪಂಚವನ್ನು ಸೃಷ್ಟಿಸುವುದರಿಂದ ಪ್ರಯೋಜನವಿದೆ ಎಂದು ಹೇಳುವುದಕ್ಕೂ ಆಗುವುದಿಲ್ಲ. ಅವನು ಕೃತಕೃತ್ಯನಾಗಿರುವುದರಿಂದ, ಧರ್ಮಾರ್ಥಕಾಮಮೋಕ್ಷ ಪುರುಷಾರ್ಥಗಳಲ್ಲಿ ಅವನಿಗೆ ಇಚ್ಛೆಯಿಲ್ಲ. ಹಾಗೆ ಇಚ್ಛೆಯೂ ಪ್ರಯೋಜನವೂ ಇಲ್ಲದೆ ಸೃಷ್ಟಿಕಾರ್ಯದಲ್ಲಿ ಏತಕ್ಕೆ ಪ್ರವರ್ತಿಸುತ್ತಾನೆ?

ಪ್ರಯೋಜನವಿಲ್ಲದೆ ಸೃಷ್ಟಿಸುವುದು ಈಶ್ವರನ ಸ್ವಭಾವವೆಂದು ಹೇಳುವ ಪಕ್ಷದಲ್ಲಿ, ಈಶ್ವರನು ಪ್ರಪಂಚವನ್ನು ನಿಷ್ಪ್ರಯೋಜನವಾಗಿ ಸೃಷ್ಟಿಸುತ್ತಾನೆಂದು ಹೇಳಿದಂತಾಯಿತು. ಇದು ಅಸಂಗತವಾದ ಮಾತಾಗಿದೆ. ಜಗತ್ತನ್ನು ಸೃಷ್ಟಿಸುವುದು ಈಶ್ವರನ ಒಂದು ಲೀಲೆಯೆಂದು ಹೇಳುವ ಪಕ್ಷದಲ್ಲಿ ಈಶ್ವರನು ಬಾಲಕನಂತೆ ಅಜ್ಞಾನಿಯೆಂದು ಹೇಳಬೇಕಾಗುವುದು. ಅಜ್ಞಾನಿಬಾಲಕನು ಆಡುವುದಕ್ಕೆ ಇಚ್ಛೆ ಪಡುತ್ತಾನೆ. ಈಶ್ವರನೂ ಅವನಂತೆಯೇ ಆದನು.

ಈಶ್ವರನು ಪ್ರಾಣಿಗಳ ಕರ್ಮವನ್ನನುಸರಿಸಿ ಶರೀರ ಮೊದಲಾದ ಸೃಷ್ಟಿಕಾರ್ಯಗಳನ್ನು ಮಾಡುತ್ತಾನೆ ಎಂದಲ್ಲಿ ಅವನು, ಬಟ್ಟೆಯನ್ನು ತಯಾರುಮಾಡುವ ಮಗ್ಗದವನಂತೆ, ಪರತಂತ್ರನಾಗುವುದರಿಂದ ಈಶ್ವರನಾಗಲಾರನು. ಮಗ್ಗದವನು ಸಾಮಗ್ರಿಗಳು ಸಿಕ್ಕಿದರೆ ಮಾತ್ರ ಬಟ್ಟೆಯನ್ನು ನೇಯುವನು. ಇಲ್ಲದಿದ್ದರೆ ಅವನಿಗೆ ಕೆಲಸಮಾಡಲಾಗುವುದಿಲ್ಲ. ಅದರಂತೆ ಈಶ್ವರನೂ ಪರತಂತ್ರನಾಗುವನು ಹಾಗೂ ಅವನು ಸರ್ವಶಕ್ತನಾಗುವುದಿಲ್ಲ.

ಶರೀರ ಮೊದಲಾದ ಸೃಷ್ಟಿ ಕಾರ್ಯಗಳಲ್ಲಿ ಜೀವಿಯ ಕರ್ಮವೇ ಕಾರಣವೆಂದಲ್ಲಿ ಈಶ್ವರನು ಕೇವಲ ನಿಮಿತ್ತಮಾತ್ರನು. ಅವನು ಕೇವಲ ಕರ್ಮದಿಂದ ಸಿದ್ಧವಾಗಿರುವ ಕಾರ್ಯವೆಂಬು ಮಾಡುತ್ತಾನೆ ಎಂದಂತಾಯಿತು. ಹೀಗೆ ಸ್ವಯಂ ಸಿದ್ಧವಾಗಿರುವ ಕಾರ್ಯಕ್ಕೆ ನಿಷ್ಕಾರಣವಾಗಿ ಈಶ್ವರನನ್ನೇಕೆ ಕರೆಯಬೇಕು.

ಪ್ರಾಣಿಗಳ ಮೇಲೆ ವಾತ್ಸಲ್ಯ ಉಳ್ಳವನಾಗಿ ಈಶ್ವರನು ಅವುಗಳನ್ನು ಅನುಗ್ರಹಿಸಬೇಕೆಂಬ ಇಚ್ಛೆಯಿಂದ ಜಗತ್ತನ್ನು ಸೃಷ್ಟಿಸುತ್ತಾನೆಂದು ಹೇಳುವ ಪಕ್ಷದಲ್ಲಿ, ದಯಾಳುವಾದ ಈಶ್ವರನು ನಿರ್ಬಾಧವೂ ಸುಖಮಯವೂ ಆದ ಸೃಷ್ಟಿಯನ್ನು ಮಾಡಬೇಕಿತ್ತು. ಸಂಸಾರದಲ್ಲಿ ಒಬ್ಬನನ್ನು ಸುಖಿಯಾಗಿ ಮತ್ತೊಬ್ಬನನ್ನು ದುಃಖಿಯನ್ನಾಗಿ ಮಾಡಬಾರದಾಗಿತ್ತು. ಜೀವನು ತಾನು ಮಾಡಿದ ತಾನು ಮಾಡಿದ ಪಾಪಕ್ಕನುಸಾರವಾಗಿ ದುಃಖವನ್ನು ಅನುಭವಿಸುತ್ತಾನೆ ಎಂದು ಹೇಳುವುದಾದರೆ ಸರ್ವಶಕ್ತನಾದ ಈಶ್ವರನು ಪಾಪವನ್ನು ಅಥವಾ ದುಃಖವನ್ನು ಹೋಗಲಾಡಿಸಿ ಸುಖವನ್ನೇ ಉಂಟು ಮಾಡಬೇಕಿತ್ತು. ಅಂತಹ ಪಾಪವನ್ನು ಮಾಡುವ ಬುದ್ಧಿಯನ್ನೂ ಉಂಟು ಮಾಡಬಾರದಾಗಿತ್ತು.

ಈಶ್ವರನು ಸೃಷ್ಟಿ ಮಾಡುವುದಕ್ಕಿಂತ ಮೊದಲು ಲೋಕವು ಇದ್ದಿತೋ? ಇಲ್ಲವೋ? ಇದ್ದಿರುವ ಪಕ್ಷದಲ್ಲಿ ಈಶ್ವರನ ಸೃಷ್ಟಿ ಪ್ರಯಾಸವು ವ್ಯರ್ಥವಾಯಿತು. ಇದ್ದುದನ್ನೇ ಮಾಡುವುದರಿಂದ ಪ್ರಯೋಜನವೇನು? ಸೃಷ್ಟಿಮಾಡುವ ಮೊದಲು ಲೋಕವು ಇಲ್ಲದಿದ್ದಪಕ್ಷದಲ್ಲಿ, ಆಕಾಶಪುಷ್ಪದಂತೆ, ಇಲ್ಲದಿದ್ದುದನ್ನು ಮಾಡುವುದೂ ಅಸಂಭವವು. ಇಲ್ಲದಿರುವ ಆಕಾಶಪುಷ್ಪವನ್ನೂ ಕತ್ತೆಯ ಕೊಡನ್ನೂ ಯಾರೂ ಮಾಡಲಾಗುವುದಿಲ್ಲ. ಅದರಂತೆ ಇಲ್ಲದಿರುವ ಲೋಕವನ್ನೂ ಈಶ್ವರನು ಮಾಡಲಾರನು.

ಸಕಲಕರ್ಮಕಲಂಕವಿಮುಕ್ತನಾದ ಮುಕ್ತಾತ್ಮನು ಲೋಕವನ್ನು ಸೃಷ್ಟಿಸುತ್ತಾನೆಂದು ಹೇಳುವುದೂ ಯುಕ್ತವಲ್ಲ. ಕೃತಕೃತ್ಯನಾಗಿ ಉದಾಸೀನನಾದ ಆ ಮುಕ್ತಾತ್ಮನಿಗೆ ಲೋಕವನ್ನು ಸೃಷ್ಟಿಸಬೇಕೆಂಬ ಇಚ್ಛೆ ಹುಟ್ಟುವುದೇ ಅಸಂಭವ. ಸಂಸಾರಜೀವನೂ ವಿಚಿತ್ರವಾದ ಲೋಕವನ್ನು ಸೃಷ್ಟಿಸುವುದು ಅಸಂಗತ. ಸಂಸಾರಿಜೀವನಿಗೆ ಅಂತಹ ಶಕ್ತಿಯೇ ಇಲ್ಲ. ಆದುದರಿಂದ ಈ ಸೃಷ್ಟಿವಾದಾವತಾರವು ಯಾವ ವಿಧದಿಂದ ವಿಚಾರಮಾಡಿದರೂ ಸಿದ್ಧವಾಗುವುದಿಲ್ಲ. ಲೋಕವನ್ನು ಮುಕ್ತನಿಂದಲೂ ಸೃಷ್ಟಿಸುವುದಕ್ಕೆ ಆಗುವುದಿಲ್ಲ. ಸಂಸಾರಿಯಿಂದಲೂ ಆಗುವುದಿಲ್ಲ. ಆದುದರಿಂದ ಲೋಕವು ಸ್ವಭಾವದಿಂದಲೇ ಇರತಕ್ಕುದಾಗಿದೆ.

ಈಶ್ವರನು ಪ್ರಜೆಗಳನ್ನೆಲ್ಲಾ ಸೃಷ್ಟಿಸಿ ಪುನಃ ಪ್ರಳಯಕಾಲದಲ್ಲಿ ನಾಶ ಮಾಡುವುದು ದೊಡ್ಡ ತಪ್ಪು. ಲೋಕದಲ್ಲಿ ಮಕ್ಕಳನ್ನು ಹುಟ್ಟಿಸಿ ಕೊಲ್ಲುವವನು ಬಹಳ ಪಾಪಿಯೆನಿಸಿಕೊಳ್ಳುತ್ತಾನೆ. ಮಕ್ಕಳಂತಿರುವ ಪ್ರಜೆಗಳನ್ನು ಸಂಹಾರಮಾಡುವುದು ಈಶ್ವರನಿಗೆ ಮಹಾಪಾಪಕ್ಕೆ ಕಾರಣವು. ಸ್ದುಷ್ಟರನ್ನು ನಿಗ್ರಹಿಸುವುದಕ್ಕೋಸ್ಕರ ಸಂಹಾರಮಾಡುತ್ತಾನೆಂದು ಹೇಳುವ ಪಕ್ಷದಲ್ಲಿ ದೈತ್ಯರೇ ಮೊದಲಾದ ಅಂತಹ ದುಷ್ಟರನ್ನು ಸೃಷ್ಟಿಸಲೇಬಾರದಾಗಿತ್ತು. ದುಷ್ಟರನ್ನು ಸೃಷ್ಟಿಸಿ ಪುನಃ ಸಂಹಾರ ಮಾಡುವಾಗ ಅವರೊಡನೆ ಶಿಷ್ಟರನ್ನು ಸಂಹರಿಸಿ ಪಾಪ ಭಾಗಿಯಾವುದಕ್ಕಿಂತಲೂ ಆ ದುಷ್ಟರನ್ನು ಸೃಷ್ಟಿಸದಿರುತ್ತಿದ್ದರೆ ಚೆನ್ನಾಗಿರುತ್ತಿರಲಿಲ್ಲವೇ? ಸರ್ವಜ್ಞನಾದ ಈಶ್ವರನಿಗೆ ಮುಂದಕ್ಕೆ ಯಾರು ದುಷ್ಟರಾಗುತ್ತಾರೆಂದು ತಿಳಿದಿರಲಿಲ್ಲವೇ?

ವಿಧಿ ಸ್ರಷ್ಟಾ, ವಿಧಾತಾ, ದೈವ, ಪೂರ್ವಕೃತಕರ್ಮ, ಈಶ್ವರ, ಈ ಶಬ್ದಗಳೆಲ್ಲ ಕರ್ಮವೆಂಬ ಬ್ರಹ್ಮನ ಪರ್ಯಾಯ ಶಬ್ದಗಳಾಗಿವೆ. ಶಬ್ದಭೇದವೇ ಹೊರತು ಅರ್ಥಭೇದವಿಲ್ಲ. ಕರ್ಮವೇ ಜಗತ್ತಿಗೆ ಕಾರಣ ಹೊರತು ಈಶ್ವರನಲ್ಲವೆಂದು ಭಾವವು.

ಅಧೋ, ಮಧ್ಯ, ಊರ್ಧ್ವ ಈ ಮೂರು ಭೇದಗಳಿಂದ ಕೂಡಿಕೊಂಡಿರುವ ಈ ಲೋಕವನ್ನು ಈಶ್ವರನು ಸೃಷ್ಟಿಸುವುದೂ ಇಲ್ಲ, ಸಂಹಾರ ಮಾಡುವುದೂ ಇಲ್ಲ. ಇದು ಸ್ವಭಾವದಿಂದಲೇ ನಿಶ್ಚಿತವಾದ ಸ್ಥಿತಿಯುಳ್ಳದ್ದಾಗಿದೆ.

No comments:

Post a Comment