copy paste disbler

Saturday, April 4, 2020

ಮಹಾಪುರಾಣದಲ್ಲಿನ ಧರ್ಮದ ಬಗೆಗಿನ ವಾದ ವಿವಾದಗಳ ವಿಶ್ಲೇಷಣೆ

ಮಹಾಪುರಾಣದಲ್ಲಿನ ಧರ್ಮದ ಬಗೆಗಿನ ವಾದ ವಿವಾದಗಳ ವಿಶ್ಲೇಷಣೆ

ಧರ್ಮದಿಂದ ಇಷ್ಟಪದಾರ್ಥವು ದೊರಕುವುದು. ಇದರಿಂದ ಸುಖವುಂಟಾಗುವುದು. ಸುಖಪ್ರಾಪ್ತಿಯು ಮನುಷ್ಯರ ಮನಃಪ್ರೀತಿಗೆ ಕಾರಣವಾಗುವುದು. ಆದ್ದರಿಂದ ಈ ಪರಂಪರೆಯು ಧರ್ಮದಿಂದ ಉಂಟಾಗುವುದು. ಎಲ್ಲದಕ್ಕೂ ಧರ್ಮವೇ ಮೂಲ ಕಾರಣ.

ರಾಜ್ಯ, ಸಂಪತ್ತು, ಭೋಗಗಳು, ಉತ್ತಮ ಕುಲದಲ್ಲಿನ ಜನನ, ಸುಂದರವಾದ ದೈಹಿಕ ಶರೀರ, ಪಾಂಡಿತ್ಯ, ಆರೋಗ್ಯ, ಇವೆಲ್ಲವೂ ಕೇವಲ ಧರ್ಮದ ಫಲ. ಕಾರಣವಿಲ್ಲದೆ ಕಾರ್ಯವು ಉಂಟಾಗುವುದಿಲ್ಲ. ದೀಪವಿಲ್ಲದೆ ಪ್ರಕಾಶವು ಕಾಣುವುದಿಲ್ಲ. ಬೀಜವಿಲ್ಲದೆ ಮೊಳಕೆಯಾಗುವುದಿಲ್ಲ. ಮೋಡವಿಲ್ಲದೆ ಮಳೆಯಾಗುವುದಿಲ್ಲ. ಧರ್ಮವಿಲ್ಲದೆ ಸಂಪತ್ತು ಉಂಟಾಗುವುದಿಲ್ಲ.

ಅಧರ್ಮದಿಂದ ಸುಖವುಂಟಾಗುವುದಿಲ್ಲ. ವಿಷದಿಂದ ಬದುಕು ಇಲ್ಲ. ಯಾವುದರಿಂದ ಸ್ವರ್ಗ ಮೋಕ್ಷಗಳು ಸಿದ್ಧಿಸುವುದೋ ಅದೇ ಧರ್ಮ.

ಜೈನ ಮತಾವಲಂಬಿಯಾದ ಮಹಾಮತಿ ಎಂಬುವನು ಭೂತವಾದವನ್ನವಲಂಬಿಸಿ ಶಾಸ್ತ್ರವನ್ನು ಉಪಕ್ರಮಿಸಿ ಜೀವತತ್ತ್ವವನ್ನು ದೂಷಿಸುತ್ತಾ ಜೀವತತ್ತ್ವವೇ ಇಲ್ಲವೆಂದು ಈ ರೀತಿ ವಾದಿಸಲಾರಂಭಿಸಿದನು :-

ಧರ್ಮಿಯು ಸಿದ್ಧವಾಗಿದ್ದರೆ ಅದರಲ್ಲಿ ಧರ್ಮವನ್ನು ಪರಿಕಲ್ಪನೆ ಮಾಡಬಹುದು. ಆದರೆ ಆ ಧರ್ಮರೂಪನಾದ ಆತ್ಮನೇ ಇಲ್ಲದಿರುವಾಗ ಧರ್ಮಫಲವು ಎಲ್ಲಿಂದ ಬರುವುದು?

ನಮ್ಮ ಶರೀರದಲ್ಲಿ ಶರೀರಕ್ಕಿಂತ ಬೇರೆ ಚೇತನವಿಲ್ಲ. ಆ ಚೇತನವು ಆಕಾಶಪುಷ್ಪದಂತೆ ಕಾಣುವುದಿಲ್ಲ. ಹೀಗಾಗಿ ಜೀವನಿಗೆ ಪಾಪ ಪುಣ್ಯ ಹಾಗೂ ಪರಲೋಕವೂ ಇಲ್ಲ. ಶರೀರವು ನಷ್ಟವಾದೊಡನೆ ನೀರಿನ ಗುಳ್ಳೆಯಂತೆ ಜೀವಗಳೂ ನಷ್ಟವಾಗುವುದು. ಅಂದರೆ ಪೃಥ್ವಿ, ಜಲ, ವಾಯು ತೇಜಗಳಿಂದ ಶರೀರವುಂಟಾಗುವುದು. ಅದರಲ್ಲಿ ಮಾತ್ರ ಚೈತನ್ಯವುಂಟಾಗುವುದು. ಶರೀರವು ನಷ್ಟವಾಗಿ ಪೃಥ್ವಿ, ಜಲ ಇತ್ಯಾದಿಗಳು ಬೆರೆಯಾದೊಡನೆ ಚೈತನ್ಯವೂ ನಷ್ಟವಾಗುವುದು. ಶರೀರಕ್ಕಿಂತ ಬೇರೆ ಆತ್ಮತತ್ತ್ವವೂ ಇಲ್ಲ; ಪಾಪಪುಣ್ಯಗಳೂ ಇಲ್ಲ. ಹೀಗಾಗಿ ಪ್ರಾಪ್ತವಾದ ಸುಖವನ್ನು ಬಿಟ್ಟು ಪರಲೋಕದ ಸುಖವನ್ನು ಇಚ್ಛಿಸುವ ಜನಗಳು ವ್ಯರ್ಥವಾಗಿ ತಪಸ್ಸು ಮೊದಲಾದವುಗಳಿಂದ ಕ್ಲೇಶಪಟ್ಟು ಈ ಲೋಕದ ಸುಖವನ್ನೂ ಕಳೆದುಕೊಳ್ಳುವರು. ಇದು ಹೇಗೆಂದರೆ ನರಿಯು ಬಾಯಿಯಲ್ಲಿರುವ ಮಾಂಸವನ್ನು ಬಿಟ್ಟು ಮೀನಿನ ಆಶೆಯಿಂದ ಮೇಲಕ್ಕೆ ಹಾರಿದಂತೆ ಆಗುತ್ತದೆ. ಬುದ್ಧಿಹೀನರಾದ ಜನಗಳು ಬಡಿಸಿದ ರುಚಿರುಚಿಯಾದ ಭೋಜನವನ್ನು ಬಿಟ್ಟು ಕೈಯನ್ನು ನೆಕ್ಕುವಂತೆ ಪರಲೋಕದಲ್ಲಿನ ಸುಖಕ್ಕೋಸ್ಕರ ಪ್ರಾಪ್ತವಾಗಿರುವ ಭೋಗಗಳನ್ನು ಬಿಟ್ಟುಬಿಡುವರು. ಹೀಗಾಗಿ ಬುದ್ಧಿಹೀನರಿಗೆ ಇಹಪರ ಸುಖಗಳೆರಡೂ ಇಲ್ಲವೆಂದು ಅಭಿಪ್ರಾಯ.

ಮಹಾಮತಿಯ ಭೂತವಾದವನ್ನು ತಿರಸ್ಕರಿಸುತ್ತಾ ಸ್ವಯಂಬುದ್ಧನು ಈ ರೀತಿ ವಿವರಿಸುವನು :
ಆತ್ಮವಿಲ್ಲವೆಂಬುದು ಸುಳ್ಳು. ಪೃಥ್ವಿ ಇತ್ಯಾದಿ ಭೂತಗಳಿಗಿಂತ ಬೇರೆಯದೇ ಆದ ಚೈತನ್ಯ ಇರುವುದು ಎಂಬುದು ಅನುಭವಸಿದ್ಧ.

ಚೈತನ್ಯವು ಶರೀರಸ್ವರೂಪವಲ್ಲ. ಹಾಗೆ ಶರೀರವೂ ಚೈತನ್ಯಸ್ವರೂಪವಲ್ಲ. ಇವೆರಡೂ ಪರಸ್ಪರ ವಿರುದ್ಧ ಧರ್ಮವುಳ್ಳದ್ದು. ಜೀವವು ಜ್ಞಾನ ಗುಣವಾದರೆ ಶರೀರವು ರೂಪ, ರಸ, ಗಂಧ, ಸ್ಪರ್ಶಗಳಿಂದ ಕೂಡಿರುವುದು.

ಒಂದಕ್ಕೊಂದು ವಿರೋಧವಾದ ಗುಣಗಳ ಸಂಬಂಧದಿಂದ ಶರೀರ ಮತ್ತು ಚೈತನ್ಯಗಳಿಗೆ ಐಕ್ಯವಾಗುವುದಿಲ್ಲ. ಉದಾಹರಣೆಗೆ - ಖಡ್ಗವೂ ಒರೆಯೂ ಬೇರೆ ಬೇರೆ ಆಗಿರುವುದರಿಂದ ಖಡ್ಗದ ರೂಪವು ಒಳಗೆ ಪ್ರಕಾಶಿಸಿದರೆ ಒರೆಯ ರೂಪವು ಹೊರಗೆ ಪ್ರಕಾಶಿಸುವುದು. ಹಾಗೇ ಚೈತನ್ಯವೂ ಶರೀರವೂ ಬೇರೆ. ಚೈತನ್ಯದ ರೂಪವು ಮಾನಸಪ್ರತ್ಯಕ್ಷದಿಂದ ತೋರುವುದು. ಶರೀರದ ರೂಪವು ಬಾಹ್ಯಕ್ಕೆ ತೋರುವುದು.

ಚೈತನ್ಯವು ಪೃಥ್ವಿ ಮೊದಲಾದ ಭೂತಗಳ ಕಾರ್ಯವೂ ಅಲ್ಲ. ಅವುಗಳ ಗುಣವೂ ಅಲ್ಲ. ಭೂತಗಳು ಜಡ. ಚೈತನ್ಯವು ಜ್ಞಾನಾತ್ಮಕ. ಭೂತಗಳು ಇಂದ್ರಿಯಪ್ರತ್ಯಕ್ಧವಾದರೆ ಚೈತನ್ಯವು ಮಾನಸಪ್ರತ್ಯಕ್ಷ.

ಚೈತನ್ಯವು ಶರೀರದ ವಿಕಾರವಲ್ಲ. ಶರೀರದ ವಿಕಾರಗಳಾದ ಬೂದಿಗಳಿಗಿಂತ ಚೈತನ್ಯವು ಬೇರೆ. ಬೇರೆ ಬೇರೆ ಸಿದ್ಧವಾಗಿರುವ ಮನೆ ಹಾಗೂ ದೀಪಕ್ಕೂ ಸಂಬಂಧವಿರುವಂತೆ ಶರೀರವು ಆಧಾರವಾಗಿ ಚೈತನ್ಯವು ಅಧೇಯವಾಗಿ ಇರುವುದರಿಂದ ಶರೀರ ಹಾಗೂ ಆತ್ಮಗಳಿಗೆ ಆಧಾರಾಧೇಯ ಸಂಬಂಧ ಇದೆ. ಮನೆಯೂ ದೀಪವೂ ಬೇರೆ ಬೇರೆ ಪದಾರ್ಥಗಳಾಗಿರುವಂತೆ ಶರೀರವೂ ಆತ್ಮನೂ ಬೇರೆ ಬೇರೆ. ಆದರೆ ಚೈತನ್ಯವು ಒಂದೆ.

ಮೂರ್ತವಾದ ಶರೀರದಿಂದ ಅಮೂರ್ತವಾದ ಚೈತನ್ಯವು ಹೇಗೆ ಉಂಟಾಗುತ್ತದೆ? ಮೂರ್ತಾಮೂರ್ತಗಳಿಗೆ ಎಲ್ಲಿಯೂ ಕಾರ್ಯಕಾರಣ ಸಂಬಂಧವಿಲ್ಲ. ಮೂರ್ತವಾದ ಕಾರಣದಿಂದ ಅಮೂರ್ತವಾದ ಕಾರ್ಯವು ಉಂಟಾಗುವುದಿಲ್ಲ.

ಪೃಥ್ವಿ, ಜಲ ಮೊದಲಾದ ಭೂತಗಳು ಶರೀರಾಕಾರವಾಗಿ ಪರಿಣಮಿಸುವುದಕ್ಕೆ ಕರ್ಮಸಹಿತನಾದ ಸಂಸಾರಿ ಆತ್ಮನನ್ನು ಬಿಟ್ಟು ಬೇರೆ ಯಾವುದು ಕಾರಣ? ಜೀವವು ಶರೀರಕ್ಕಿಂತ ವಿಲಕ್ಷಣವಾಗಿದೆ. ಶರೀರದ ಹಾಗೂ ಜೀವದ ಗುಣಗಳು ಬೇರೆ ಬೇರೆ.

ಚೈತನ್ಯವು ಶರೀರದಿಂದಲೇ ಉಂಟಾಗುವುದೆಂಬುದನ್ನು ಒಂದು ಪಕ್ಧ ಒಪ್ಪಿದರೂ, ಶರೀರವು ಚೈತನ್ಯಕ್ಕೆ ಉಪಾದಾನಕಾರಣವೋ? ಸಹಕಾರಿಕಾರಣವೋ? ಎಂಬ ಪ್ರಶ್ನೆಯು ಉದ್ಭವಿಸುವುದು. ಶರೀರವು ಜಡವಾಗಿರುವುದರಿಂದ ಉಪಾದಾನಕಾರಣವಾಗುವುದಿಲ್ಲ. ಜೀವವು ಜ್ಞಾನರೂಪವಾಗಿದೆ. ವಿಜಾತೀಯವಾದ ಶರೀರದಿಂದ ವಿಜಾತೀಯವಾದ ಆತ್ಮನು ಜನಿಸುವುದಿಲ್ಲ. ಹಾಗಾಗಿ ಶರೀರವು ಉಪಾದಾನಕಾರಣವಲ್ಲ.

ಶರೀರವು ಸಹಕಾರಿಕಾರಣವೆಂದು ಹೇಳುವ ಪಕ್ಷದಲ್ಲಿ, ಜೀವಕ್ಕೆ ಉಪಾದಾನ ಮುಖ್ಯ ಕಾರಣವನ್ನು ಬೇರೆ ಹುಡುಕಬೇಕು. ಮಡಿಕೆಗೆ ಮಣ್ಣು ಹೇಗೋ ಹಾಗೆ ಯಾವ ಕಾರಣವು ಕಾರ್ಯರೂಪವಾಗಿ ಪರಿಣಮಿಸುತ್ತದೆಯೋ ಅದಕ್ಕೆ ಉಪಾದಾನಕಾರಣ ಎಂದು ಹೆಸರು. ಬೇರೆ ಕಾರಣಗಳಿಗೆ ಸಹಕಾರಿಕಾರಣಗಳೆಂದು ಹೆಸರು. ಸೂಕ್ಷ್ಮವಾದ ಪೃಥ್ವಿ ಇತ್ಯಾದಿ ಭೂತಸಮೂಹವೇ ಉಪಾದಾನಕಾರಣ ಎಂಬುದೂ ಸರಿಯಲ್ಲ. ಭೂತಗಳಿಂದುಂಟಾದ ಆ ದೇಹಕ್ಕಿಂತ ಚೈತನ್ಯವು ಸಂಪೂರ್ಣ ಬೇರೆಯಾಗಿದೆ. ಹೀಗಾಗಿ ಚೈತನ್ಯಕ್ಕೆ ಜೀವವೇ ಉಪಾದಾನಕಾರಣ ಎಂದು ಸ್ವೀಕರಿಸಬೇಕು.

ಚೈತನ್ಯವು ಪೃಥ್ವಿ ಮೊದಲಾದವುಗಳಲ್ಲಿ ಅವ್ಯಕ್ತವಾಗಿ ಮೊದಲೇ ಇರುತ್ತದೆಂದು ಹೇಳುವುದೂ ಸರಿಯಲ್ಲ. ಅಚೇತನವಾದ ಪುದ್ಗಲಗಳಲ್ಲಿ ಚೈತನ್ಯ ಶಕ್ತಿಯ ಸಂಬಂಧವು ಕಾಣುವುದಿಲ್ಲ. ಅವು ಜಡವಾಗಿರುತ್ತದೆ.

ಮಧ್ಯಾವಸ್ಥೆಯಲ್ಲಿರುವ ಶರೀರದಲ್ಲಿ ಜೀವನಿಗೆ ಆಹಾರ ಮೊದಲಾದವುಗಳಲ್ಲಿ ಇಚ್ಛೆಗಳು ಉಂಟಾಗುತ್ತದೆ. ಇದು ಪೂರ್ವಶರೀರಾವಸ್ಥೆಯ ಸಂಸ್ಕಾರ. ಅದರಂತೆ ಮೊದಲು ಉತ್ಪತ್ತಿಯಾಗುವ ಶರೀರಕ್ಕೂ ಮೊದಲು ಶರೀರಸಹಿತವಾಗಿದ್ದ ಜೀವವೇ ಕಾರಣವು. ಮಗುವು ಜನಿಸಿದ ಕೂಡಲೇ ಸ್ತನ್ಯಪಾನವನ್ನು ಮಾಡಬೇಕೆಂದು ಅಪೇಕ್ಷಿಸುತ್ತದೆ. ಇದು ಪೂರ್ವದಲ್ಲಿ ಅನುಭವಿಸಿದ ಸ್ಮರಣೆ ಇಲ್ಲದಿದ್ದರೆ ಉಂಟಾಗಲಾರದು. ಹಾಗೇ ಪ್ರಕೃತ ದೇಹವು ಅಂತವಾದ ಮೇಲೆ ಜೀವವು ಇನ್ನೊಂದು ದೇಹವನ್ನು ಹೊಂದುತ್ತದೆ. ಇದರಿಂದ ಶರೀರ ಹೊರತು ಬೇರೆ ಜೀವ ತತ್ತ್ವವಿದೆಯೆಂದು ಸಾಬೀತಾಗುತ್ತದೆ. ಅಂತಹ ಜೀವವು ಅನಾದಿಕಾಲದಿಂದಲೂ ಸಂತಾನಕ್ರಮದಿಂದ ಅವಿಚ್ಛಿನ್ನವಾದ ಶರೀರವುಳ್ಳದ್ದಾಗಿಯೇ ಇರುವುದು. ಹಾಗಿರುವ ಶರೀರಗಳಿಗೆ ತೈಜಸಕಾರ್ಮಗಳೆನ್ನುವರು. ಕಾರ್ಮಣಶರೀರವೇ ಔದಾರಿಕ ಮೊದಲಾದ ಶರೀರಗಳಿಗೆ ಬೀಜವಾಗಿದೆ.

ಜೀವಕ್ಕೆ ಭೂತಕಾಲದ ಶರೀರವೂ ಭವಿಷ್ಯತ್ಕಾಲದ ಶರೀರವೂ ಎಲ್ಲಿ ಉಂಟಾಗುತ್ತದೋ ಅದೇ ಪರಲೋಕ. ಆ ಪರಲೋಕವುಳ್ಳವನೇ ಪರಲೋಕಿಯು (ಆತ್ಮ). ಅವನೇ ಪರಲೋಕದಲ್ಲಿ ಪಾಪಪುಣ್ಯಗಳ ದುಃಖಸುಖರೂಪವಾದ ಫಲಗಳನ್ನು ಅನುಭವಿಸುವನು. ಹಾಗಾಗಿ ಪಂಚಭೂತಾತ್ಮಕವಾದ ಶರೀರವೇ ಆತ್ಮನೆನ್ನುವುದು ಅಸಂಗತ. ಅಂಧಕಾರದಲ್ಲಿ ಕಣ್ಮುಚ್ಚಿಕೊಂಡು "ನಾನು" ಎಂಬ ಶಬ್ದವನ್ನು ಜೋರಾಗಿ ಕೂಗಿದರೆ ಅದಕ್ಕೆ ವಾಚ್ಯನು ಆತ್ಮನೇ ಹೊರತು ಶರೀರವಲ್ಲ.

ಕೆಲವು ಜೀವಗಳಿಗೆ ಪೂರ್ವಜನ್ಮದ ಸ್ಮರಣೆಗೆ (ಜಾತಿಸ್ಮರಣೆ) ಬರುವುದರಿಂದ ಜೀವನು ನವೀನ ಶರೀರವನ್ನು ಹೊಂದುವುದೂ ಶರೀರವನ್ನು ತ್ಯಜಿಸುವುದೂ ನಿಶ್ಚಯವಾಗಿರುವುದರಿಂದಲೂ ಜೀವವೆಂಬ ಪದಾರ್ಥ ಇದೆಯೆಂದು, ಜೀವದ ಅಸ್ತಿತ್ವವು ಸಿದ್ಧವಾಗುತ್ತದೆ.

ಮತ್ತೊಬ್ಬ ಜೈನ ಮಾತಾವಲಂಬಿ ಸಂಭಿನ್ನಮತಿ ಎಂಬುವನು ವಾದದಲ್ಲಿ ಅಸಕ್ತಿಯುಳ್ಳವನಾಗಿ ವಿಜ್ಞಾನಾದ್ವೈತವಾದವನ್ನವಲಂಬಿಸಿ ಜೀವವೆಂಬ ವಸ್ತು ಇಲ್ಲವೆಂದು ಈ ರೀತಿಯಾಗಿ ವಾದಮಾಡಲು ಪ್ರಾರಂಭಿಸಿದನು :-

ಜೀವವೆಂಬ ಪದಾರ್ಥವು ಕಾಣಿಸದೆ ಇರುವುದರಿಂದ ಅದು ಇಲ್ಲ. ಅದು ಇದ್ದಪಕ್ಷದಲ್ಲಿ ನಮಗೆ ಕಾಣಿಸಬೇಕಿತ್ತು. (ಜೀವೋನಾಸ್ತ್ಯನುಪಾಲಬುದೇಹೆ) ಜಗತ್ತು ಕ್ಷಣನಶ್ವರವಾಗಿರುವುದರಿಂದ ಈ ಕಾಣುವ ಪದಾರ್ಥಗಳೆಲ್ಲವೂ ಜ್ಞಾನಮಯವೇ ಆಗಿದೆ. ಜ್ಞಾನಕ್ಕಿಂತ ಬೇರೆ ಪದಾರ್ಥ ಯಾವುದೂ ಇಲ್ಲ.

ವಿಜ್ಞಾನವಾದರೋ ಅಂಶಗಳಿಲ್ಲದಿರುವ ಅಖಂಡವಾದ ಒಂದೇ ವಸ್ತುವೂ ಒಂದುಕ್ಷಣ ಕಾಲವಿದ್ದು ಸಂಪೂರ್ಣವಾಗಿ ನಾಶವಾಗತಕ್ಕುದೂ ವೇದ್ಯ ವೇದಕ ಸಂವಿತ್ತಿ ಈ ಆಕಾರಗಳಿಂದ ಬೇರೆಯೂ ಆಗಿ ಪ್ರಕಾಶಿಸುತ್ತದೆ. ಆ ವಿಜ್ಞಾನವು ಬೇರೆ ಪದಾರ್ಥಗಳಿಂದ ತಿಳಿಯಲ್ಪಡತಕ್ಕುದೂ ಅಲ್ಲ. ಅದು ಬೇರೆ ಪದಾರ್ಥಗಳನ್ನು ತಿಳಿಯುವುದೂ ಇಲ್ಲ.

ವಿಜ್ಞಾನವು ಸಂಪೂರ್ಣವಾಗಿ ನಾಶವಾದರೂ ಅದರ ಸಂತಾನಪರಂಪರೆಯು ಇರುವುದರಿಂದ ಸ್ಮೃತಿ ಪ್ರತ್ಯಭಿಜ್ಞಾನ ಮೊದಲಾದ ಜ್ಞಾನ ಉಂಟಾಗುವುದು. ಆದರೆ ಆ ಸಂತಾನವೂ ಭ್ರಾಂತಿರೂಪವಾಗಿರುವುದರಿಂದ ಸಂತಾನಿಗಳಾದ ಕ್ಷಣಿಕಜ್ಞಾನಗಳಿಂದ ಬೇರೆಯಾಗಿರುವುದಿಲ್ಲ. ಪೂರ್ವಜ್ಞಾನಕ್ಕೆ ಸದೃಶವಾದ ಉತ್ತರಜ್ಞಾನದ ಉತ್ಪತ್ತಿಗೆ ಸಂತಾನವೆಂದೂ, ಅಂತಹ ಸಂತಾನವು ಉತ್ತರೋತ್ತರವಾಗಿ ಉಂಟಾಗುತ್ತಲೇ ಇರುವುದರಿಂದ ಸ್ಮರಣ ವಿಜ್ಞಾನ ಉಂಟಾಗುವುದು.

ಉಗುರು, ಕೂದಲು ಮುಂತಾದವುಗಳನ್ನು ಕತ್ತರಿಸಿದ ನಂತರ ಪುನಃ ಬೆಳೆದವುಗಳಲ್ಲಿ 'ಇವು ಮೊದಲಿನ ಉಗುರು ಕೂದಲುಗಳೇ' ಎಂದು ಉಂಟಾಗುವ ಪ್ರತ್ಯಭಿಜ್ಞಾನವು ಹೇಗೆ ಮಿಥ್ಯಾಜ್ಞಾನವೋ ಹಾಗೆ ಕ್ಷಣಕಾಲದಲ್ಲಿ ನಾಶವಾಗುವ ವಸ್ತುವಿನಲ್ಲಿ, 'ಇದು ಮೊದಲು ನೋಡಿದ್ದ ವಸ್ತುವೇ' ಎಂಬುದಾಗಿ ಉಂಟಾಗುವ ಪ್ರತ್ಯಭಿಜ್ಞಾನವೂ ಭ್ರಮೆಯಿಂದ ಕೂಡಿರುವುದು.

ಆದ್ದರಿಂದ ವಿಜ್ಞಾನಪರಂಪರೆಗಿಂತ ಬೇರೆ ಪರಲೋಕದಲ್ಲಿ ಸುಖದುಃಖಗಳನ್ನು ಅನುಭವಿಸುವ ಜೀವವೆಂಬ ಪದಾರ್ಥ ಇಲ್ಲ. ವಿಜ್ಞಾನವೇ ವಾಸ್ತವಿಕ ತತ್ವ.

ಸಂಭಿನ್ನಮತಿಯ ವಿಜ್ಞಾನಾದ್ವೈತವಾದವನ್ನು ತಿರಸ್ಕರಿಸುತ್ತಾ ಸ್ವಯಂಬುದ್ಧನು ಈ ರೀತಿ ವಿವರಿಸುವನು :

ಎಲೈ ವಿಜ್ಞಾನಾದ್ವೈತವಾದಿಯೇ! ವಿಜ್ಞಾನವೇ ತತ್ತ್ವವು, ಬೇರೆ ಯಾವುದೂ ಇಲ್ಲವೆಂದು ಯಾವುದರಿಂದ ಸಿದ್ಧವಾಗುತ್ತದೆ? ವಿಜ್ಞಾನದ ಸಿದ್ಧಿಯು ವಿಜ್ಞಾನದಿಂದಲೇ ಆಗುವುದಿಲ್ಲ. ಇಲ್ಲಿ ವಿಜ್ಞಾನವು ಸಾಧ್ಯವಾಗಿದೆ. ಅದನ್ನು ಸಿದ್ಧಮಾಡುವುದಕ್ಕೆ ಬೇರೆ ಯಾವುದಾದರೂ ಹೇತು (ಸಾಧನ) ಬೇಕು. ಹಾಗೆ ಬೇರೆ ಸಾಧನದಿಂದ ಸಿದ್ಧವಾಗುವ ಪಕ್ಷದಲ್ಲಿ ದ್ವೈತವು ಸಿದ್ಧವಾಗುತ್ತದೆ. ವಿಜ್ಞಾನವೇ ಹೇತುವಾಗುವ ಪಕ್ಷದಲ್ಲಿ ಸಾಧ್ಯಸಾಧನಗಳೆರಡೂ ಒಂದೇ ಆಗುವುದು. ಇದು ಸಾಧ್ಯಸಮಹಿತ್ವಾ ಭಾಸವಾಗುವುದು. ಸಾಧ್ಯವು ಅಸಿದ್ಧವಾಗಿರುವಂತೆ ಸಾಧನವೂ ಅಸಿದ್ಧವಾಯಿತು. ಆದ್ದರಿಂದ ತತ್ತ್ವನಿಶ್ಚಯವು ಹೇಗಾಗುವುದು?

ವಿಜ್ಞಾನದಿಂದ ವ್ಯತಿರಿಕ್ತವಾದ ವಾಕ್ಯಪ್ರಯೋಗವು ಕಾಣುವುದರಿಂದ ಆ ವಾಕ್ಯಕ್ಕೆ ವಾಚ್ಯವಾದ ಬಾಹ್ಯಪದಾರ್ಥವೂ ಸಿದ್ಧವಾಗುತ್ತದೆ. ಹಾಗೆ ಬಾಹ್ಯಪದಾರ್ಥವೂ ಸಿದ್ಧವಾಗುವುದರಿಂದ ವಿಜ್ಞಾನ ಮಾತ್ರವೇ ತತ್ತ್ವ ಎಂಬ ಮಾತು ಸುಳ್ಳು. ವಾಕ್ಯವು ಬಾಹ್ಯಪದಾರ್ಥವನ್ನು ಹೇಳದೆ ವಿಜ್ಞಾನವನ್ನೇ ಹೇಳುವುದರಿಂದ ವಿಜ್ಞಾನ ಮತ್ತು ವಿಜ್ಞಾನವನ್ನು ಹೇಳುವ ವಾಕ್ಯ ಎರಡೂ ಹೊರತು ಬೇರೆ ಪದಾರ್ಥವಿಲ್ಲ ಎಂದು ಹೇಳುವ ಪಕ್ಷದಲ್ಲಿ, ವಿಜ್ಞಾನ ಮತ್ತು ವಾಕ್ಯ ಇವೆರಡು ಪದಾರ್ಥಗಳು ಸಿದ್ಧವಾಗುವುದರಿಂದ ದ್ವೈತವು ಸಿದ್ಧವಾಯಿತು. ವಿಜ್ಞಾನವನ್ನು ಹೇಳುವ ವಾಕ್ಯವೂ ವಿಜ್ಞಾನವೇ ಆಗಿದೆಯೆಂದು ಹೇಳಿದಲ್ಲಿ ಯಾವುದನ್ನು ಯಾವುದರಿಂದ ಸಾಧಿಸಿದಂತಾಯಿತು? ಅಂದರೆ ವಾಚ್ಯವಾಚಕಗಳೆರಡೂ ಒಂದೇ ಆಗಿರುವುದರಿಂದ ತತ್ತ್ವವ್ಯವಸ್ಥೆ ಆಗುವುದಿಲ್ಲ. ವಿಜ್ಞಾನವೇ ತತ್ತ್ವವಾಗುವ ಸಂದರ್ಭದಲ್ಲಿ ಅದನ್ನು ತಿಳಿಸುವುದು ಯಾವುದು? ವಾಕ್ಯವೇ ತತ್ತ್ವವಾಗುವ ಪಕ್ಷದಲ್ಲಿ ಅದಕ್ಕೆ ವಾಚ್ಯ ಯಾವುದು? ನಿರಂಶವಾದ ವಿಜ್ಞಾನವೊಂದೇ ತತ್ತ್ವವಾದಲ್ಲಿ ಆ ಜ್ಞಾನಕ್ಕೆ ಗ್ರಾಹ್ಯಪದಾರ್ಥವೇ ಇಲ್ಲವೆಂದಾಯಿತು. ಗ್ರಾಹ್ಯವಿಲ್ಲದಿದ್ದರೆ ಗ್ರಾಹಕ (ಜ್ಞಾನ)ವೂ ಇರುವುದಿಲ್ಲ. ಇದರಿಂದ ಸರ್ವಶೂನ್ಯ ಪ್ರಸಂಗವು ಉಂಟಾಗುತ್ತದೆ.

ವಿಜ್ಞಾನವು ಬೇರೆ ಜ್ಞಾನವನ್ನು ತಿಳಿಯುತ್ತದೆಯೋ ಇಲ್ಲವೋ, ತಿಳಿಯುವ ಪಕ್ಷದಲ್ಲಿ ಸಮಸ್ತ ಜ್ಞಾನಗಳೂ ನಿರಾವಲಂಬನಗಳಾಗಿವೆ ಎಂದು ಹೇಳುವ ಮಾತು ಸುಳ್ಳಾಯಿತು. ಬೇರೆ ಜ್ಞಾನವನ್ನು ತಿಳಿಯುವುದರಿಂದ ಆ ಜ್ಞಾನವೇ ಅವಲಂಬನವಾಯಿತು.

ಪ್ರಪಂಚವೆಲ್ಲ ವಿಜ್ಞಾನಮಯವಾಗುವ ಪಕ್ಷದಲ್ಲಿ ವಚನದಿಂದುಂಟಾಗುವ ಬಾಹ್ಯಪದಾರ್ಥ ಜ್ಞಾನವೆಲ್ಲ ಸುಳ್ಳಾಗಬೇಕಾಯಿತು. ಬಾಹ್ಯಾರ್ಥವು ಸುಳ್ಳಾದುದರಿಂದ ಅದನ್ನು ಹೇಳುವ ವಾಕ್ಯವೂ ಸುಳ್ಳಾಯಿತು. ಬಾಹ್ಯಪದಾರ್ಥಗಳು ಯಥಾರ್ಥವಾಗಿಲ್ಲದಿರುವ ಸಂದರ್ಭದಲ್ಲಿ, 'ಇಂತಹ ಮಾತು ಸತ್ಯವಾದುದು, ಇಂತಹುದು ಸುಳ್ಳು', ಎಂಬ ಲೋಕವ್ಯವಹಾರವು ಹೇಗುಂಟಾಗುವುದು? ಸತ್ಯ ಮಿಥ್ಯಾ ಎಂಬ ವ್ಯವಹಾರವು ಬಾಹ್ಯಪದಾರ್ಥಗಳನ್ನವಲಂಬಿಸಿಯೇ ಉಂಟಾಗುತ್ತದೆ. ಬಾಹ್ಯಪದಾರ್ಥಗಳೇ ಇಲ್ಲದಿದ್ದ ಪಕ್ಷದಲ್ಲಿ ಸತ್ಯ ಮಿಥ್ಯಾ ವ್ಯವಹಾರವು ಉಂಟಾಗಲಾರದು.

ಆದ್ದರಿಂದ ಸಾಧನ ಮೊದಲಾದ ಪ್ರಯೋಗಗಳನ್ನು ಸ್ವೀಕಾರಮಾಡುವುದರಿಂದ ಬಾಹ್ಯ ಪದಾರ್ಥಗಳನ್ನೂ ಸ್ವೀಕರಿಸಬೇಕು. ವಿಜ್ಞಾನವೇ ತತ್ತ್ವವೆಂಬ ವಾದವು ಬಾಲಿಶವಾಗಿ ನಿಸ್ಸಾರವಾಗಿದೆ.

ಶತಮತಿಯೆಂಬ ಮಂತ್ರಿಯು ಆತ್ಮಶ್ಲಾಘನೆ ಮಾಡುತ್ತಾ ಶೂನ್ಯವಾದವನ್ನು ಮಂಡಿಸುತ್ತಾ ಹೀಗೆ ಹೇಳಿದನು :-
ಈ ಜಗತ್ತೆಲ್ಲವೂ ಶೂನ್ಯವೇ ಆಗಿದೆ. ಸ್ವಪ್ನದಲ್ಲಿಯೂ ಇಂದ್ರಜಾಲ ಇತ್ಯಾದಿಗಳಲ್ಲಿಯೂ ಆನೆ, ಕುದುರೆ ಮೊದಲಾದ ಪದಾರ್ಥಗಳು ಕಾಣುವಂತೆ, ಭ್ರಾಂತಿಯಿಂದ ಇವುಗಳೆಲ್ಲವೂ ಕಾಣುತ್ತಿದ್ದು, ಇರಲ್ಲ ಮಿಥ್ಯಾರೂಪವಾಗಿದೆ.

ಆದ್ದರಿಂದ ಜೀವವೆಲ್ಲಿದೆ? ಪರಲೋಕವೆಲ್ಲಿದೆ? ಇಂದ್ರಜಾಲಿಕರು ಮಾಡುವ ಮಾಯಾ ನಗರದಂತೆ ಇದೆಲ್ಲ ಮಿಥ್ಯಾರೋಪವಾಗಿದೆ. ಜಗತ್ತೆಲ್ಲವೂ ಶೂನ್ಯ. ಯಥಾರ್ಥವನ್ನು ತಿಳಿಯದವರು ಪರಲೋಕಕ್ಕೊಸ್ಕರ ತಪಸ್ಸಿನಲ್ಲಿ ತತ್ಪರರಾಗಿ ಸುಮ್ಮನೆ ಶರೀರವನ್ನು ಒಣಗಿಸಿಕೊಂಡು ದುಃಖಪಡುವರು. ಬೇಸಿಗೆಯ ಆರಂಭದಲ್ಲಿ ಮೃಗಗಳು ಥಳಥಳಿಸುವ ಬಿಸಿಲುಕುದುರೆಯನ್ನು ನೋಡಿ ನೀರಿನ ಆಸೆಯಿಂದ ಓಡುವಂತೆ, ಭೋಗವನ್ನಪೇಕ್ಷಿಸುವ ಈ ಜೀವಗಳೂ ವ್ಯರ್ಥವಾಗಿ ಕ್ಲೇಶವನ್ನು ಅನುಭವಿಸುತ್ತವೆ.

ಮಂತ್ರಿ ಶತಮತಿಯ ಶೂನ್ಯವಾದವನ್ನು ತಿರಸ್ಕರಿಸುತ್ತಾ ಸ್ವಯಂಬುದ್ಧನು ಈ ರೀತಿ ವಿವರಿಸುವನು:-

ಎಲೈ ಶೂನ್ಯವಾದಿಯಾದ ಶತಮತಿಯೇ! ನಿನ್ನ ಶೂನ್ಯವಾದದಲ್ಲಿಯೂ ಆ ಶೂನ್ಯತ್ವವನ್ನು ಹೇಳುವ ವಚನವೂ ಅದರಿಂದ ಉಂಟಾಗುವ ಜ್ಞಾನವೂ ಇವೆಯೋ ಇಲ್ಲವೋ ಎಂಬುದಾಗಿ ಎರಡು ಪಕ್ಷಗಳು ಉಂಟಾಗುತ್ತವೆ.

ವಚನವೂ ವಿಜ್ಞಾನವೂ ಇವೆಯೆಂದು ಹೇಳಿದಲ್ಲಿ, ಜಗತ್ತೆಲ್ಲವೂ ಶೂನ್ಯವಾಗಿದೆ ಎಂದು ಹೇಳಿ ಮತ್ತೆ ವಚನ ಹಾಗೂ ವಿಜ್ಞಾನವನ್ನು ಸ್ವೀಕರಿಸಿದಂತಾಯಿತು. ಅಂದರೆ ಸ್ವವಚನ ಭಾಧಿತವಾಯಿತೆಂದು. ಆ ವಚನವೂ ವಿಜ್ಞಾನವೂ ಇರುವಂತೆ ಎಲ್ಲಾ ವಸ್ತುಗಳೂ ಇರಬಹುದು. ಅವೆರಡೂ ಇಲ್ಲದ ಪಕ್ಷದಲ್ಲಿ ಶೂನ್ಯವಾದವನ್ನು ಹೇಗೆ ಸಿದ್ಧಮಾಡುವುದು? ಆದ್ದರಿಂದ ಜೀವ ಎಂಬ ವಸ್ತುವೂ ದಯಾ ಸಂಯಮ ಸ್ವರೂಪವಾದ ಧರ್ಮವೂ ಇವೆ. ಜಗತ್ತು ಶೂನ್ಯವಲ್ಲ.

ತತ್ತ್ವಜ್ಞಾನಿಗಳು ಸರ್ವಜ್ಞರು ಹೇಳಿದ ಮಾತನ್ನೇ ತತ್ತ್ವವನ್ನಾಗಿ ತಿಳಿಯುತ್ತಾರೆ. ಇದಕ್ಕೆ ವ್ಯತಿರಿಕ್ತವಾದ ಬೇರೆ ಮತಗಳು ತಾವು ಆಪ್ತರಲ್ಲದಿದ್ದರೂ ಆಪ್ತರೆಂದು ತಿಳಿಯುವವರ ಮತಗಳಾದ್ದರಿಂದ ಜ್ಞಾನಿಗಳಿಗೆ ತ್ಯಾಜ್ಯ. ಜ್ಞಾನಿಗಳು ಅಂತಹ ಮಿಥ್ಯಾ ಮತಗಳನ್ನು ಅವಲಂಬಿಸುವುದಿಲ್ಲ.

ಮೂಲ : ಜೈನ ಮಹಾಪುರಾಣ







Thursday, April 2, 2020

ಈಶ್ವರನ ಸೃಷ್ಟಿಕ್ರಿಯೆಗಳ ಖಂಡನೆ

ಈಶ್ವರನ ಸೃಷ್ಟಿಕ್ರಿಯೆಗಳ ಖಂಡನೆ

ಮಹಾಪುರಾಣದಲ್ಲಿ ಲೋಕ, ದೇಶ, ಪಟ್ಟಣ, ರಾಜ್ಯ, ತೀರ್ಥ, ದಾನ, ತಪಸ್ಸು, ಗತಿಗಳು, ಫಲ ಇತ್ಯಾದಿಗಳ ಬಗ್ಗೆ ವರ್ಣಿಸಲಾಗಿದೆ. ಅವುಗಳ ಬಗ್ಗೆ ಸಂಕ್ಷೇಪವಾಗಿ ಅರಿಯೋಣ.

ವಿಸ್ತಾರವಾಗಿ ಲೋಕದ ಹೆಸರು, ದಿಕ್ಕುಗಳ ವರ್ಣನೆ ವರ್ಣಿಸುವುದಕ್ಕೆ ಲೋಕಾಖ್ಯಾನವೆನ್ನುವರು;
ಲೋಕದಲ್ಲಿನ ದೇಶ, ಪರ್ವತ, ದ್ವೀಪ, ಸಮುದ್ರ ಇತ್ಯಾದಿಗಳ ವರ್ಣನೆಯನ್ನು ದೇಶಾಖ್ಯಾನವೆನ್ನುವರು;
ಭರತ ದೇಶದಲ್ಲಿನ ರಾಜಧಾನಿಗಳ ವರ್ಣನೆಯನ್ನು ಪುರಾಖ್ಯಾನವೆನ್ನುವರು;
ಈ ದೇಶದಲ್ಲಿನ ಅನೇಕ ನಗರಗಳನ್ನಾಳುತ್ತಿರುವ ರಾಜರುಗಳ ವರ್ಣನೆಯನ್ನು ರಾಜಾಖ್ಯಾನವೆನ್ನುವರು;
ತೀರ್ಥಕ್ಷೇತ್ರಗಳ ವರ್ಣನೆಯನ್ನು ತೀರ್ಥಾಖ್ಯಾನವೆನ್ನುವರು;
ನರಕಾದಿಭೇದದಿಂದ ಗತಿಗಳು ನಾಲ್ಕು. ಈ ಗತಿಗಳ ವರ್ಣನೆಯನ್ನು ಗತ್ಯಾಖ್ಯಾನವೆನ್ನುವರು;
ಪ್ರಾಣಿಗಳಿಗುಂಟಾಗುವ ಪಾಪಪುಣ್ಯಗಳ ವರ್ಣನೆಯನ್ನು ಫಲಾಖ್ಯಾನವೆನ್ನುವರು;

ಜೀವ ಇರುವ, ಇಲ್ಲದಿರುವ ಪದಾರ್ಥಗಳು ಯಾವುದರಲ್ಲಿ ಕಾಣುವುದೋ ಅದೇ ಲೋಕ. ಕ್ಷೇತ್ರವೆಂಬ ಪದವು 'ಕ್ಷೀ' ಧಾತುವಿನಿಂದ ಉಂಟಾಗಿದೆ. ಜೀವ ಮೊದಲಾದ ಎಲ್ಲ ಪದಾರ್ಥಗಳೂ ಈ ಲೋಕದಲ್ಲಿರುವುದರಿಂದ ಲೋಕವನ್ನು ಕ್ಷೇತ್ರವನ್ನಾಗಿಯೂ ಪರಿಗಣಿಸಬಹುದು. ಈ ಲೋಕವು ಅನಂತಾಕಾಶದ ಮಧ್ಯದಲ್ಲಿದೆ. ಜೈನ ಮತಾನುಯಾಯಿಗಳು ಸೃಷ್ಟಿವಾದವನ್ನು ಈ ಕೆಳಗಿನ ವಾದದ ಮೂಲಕ ನಿರಾಕರಿಸುತ್ತಾರೆ:

ಸೃಷ್ಟಿಯಿಂದ ಬಹಿರ್ಭೂತನಾದ ಜಗತ್ಕರ್ತನು ಎಲ್ಲಿದ್ದುಕೊಂಡು ಲೋಕವನ್ನು ಸೃಷ್ಟಿಸುವನು? ನಿರಾಧಾರನೂ ಹಾಗೂ ನಿರ್ವಿಕಾರನೂ ಆದ ಸೃಷ್ಟಿಕರ್ತನು ಈ ಜಗತ್ತನ್ನು ಸೃಷ್ಟಿಸಿ ಎಲ್ಲಿಡುವನು?

ಸಮಸ್ತಚರಾಚಾರಪದಾರ್ಥಗಳನ್ನು ಒಳಗೊಂಡಿರುವ ಈ ವಿಶ್ವವನ್ನು ರಚಿಸುವುದರಲ್ಲಿ ಸಮರ್ಥನಾದವನು ಯಾರೂ ಇಲ್ಲ. ಶರೀರರಹಿತನಾದ ಈಶ್ವರನಿಂದ ಮೂರ್ತಪದಾರ್ಥಗಳ ಸೃಷ್ಟಿಯಾಗುವುದು ಅಸಂಭವ.

ಸೃಷ್ಟಿಕರ್ತನು ಬೇರೆ ಸಲಕರಣೆಗಳಿಲ್ಲದೆ ಪ್ರಪಂಚವನ್ನು ಹೇಗೆ ಸೃಷ್ಟಿಸುವನು? ಮೊದಲು ಸಲಕರಣೆಗಳನ್ನು ಸೃಷ್ಟಿಸಿ ನಂತರ ಲೋಕಸೃಷ್ಟಿ ಮಾಡುತ್ತಾನೆಂದಲ್ಲಿ ಆ ಸಲಕರಣೆಗಳನ್ನು ಯಾವ ಸಲಕರಣೆಯಿಂದ ಸೃಷ್ಟಿಸಿದನು? ಹೀಗೇ ಪ್ರಶ್ನಿಸುತ್ತಾ ಹೋದರೆ ಅದೇ ಉತ್ತರವನ್ನು ಹೇಳುತ್ತಾ ಯಾವ ವ್ಯವಸ್ಥೆಯೂ ಆಗದೆ ಅನವಸ್ಥಾದೋಷವು ಆಗುವುದು.

ಆ ಸಲಕರಣೆಗಳು ಸ್ವಭಾವದಿಂದಲೇ ಸಿದ್ಧವಾಗಿತ್ತೆಂದರೆ ಅದರಂತೆ ಲೋಕವೂ ಸ್ವಭಾವದಿಂದ ಸಿದ್ಧವಾಗಿತ್ತು ಎಂಬುದು ಸಿದ್ಧವಾಗುವುದು. ಸೃಷ್ಟಿಕರ್ತನು ಹೇಗೆ ಅನಾದಿಕಾಲದಿಂದಲೂ ಸ್ವಭಾವದಿಂದ ಸಿದ್ಧನಾಗಿದ್ದಾನೆ ಎಂದು ಹೇಳುತ್ತೀರೋ ಹಾಗೆಯೇ ಪ್ರಪಂಚವೂ ಅನಾದಿಕಾಲದಿಂದಲೂ ಸ್ವಭಾವದಿಂದ ಸಿದ್ಧವಾಗಿರುವುದು. ಅದಕ್ಕೊಬ್ಬ ಸೃಷ್ಟಿಕರ್ತನನ್ನು ಏಕೆ ಮಾಡಬೇಕು?

ಸಾಮಗ್ರಿಗಳಿಲ್ಲದಿದ್ದರೂ ಸ್ವತಂತ್ರನಾದ ಈಶ್ವರನು ತನ್ನ ಇಚ್ಛಾಮಾತ್ರದಿಂದ ಪ್ರಪಂಚವನ್ನು ಸೃಷ್ಟಿಸುತ್ತಾನೆ ಎಂದು ಹೇಳುವ ಪಕ್ಷದಲ್ಲಿ ಈ ಯುಕ್ತಿಶೂನ್ಯವಾದ ಇಚ್ಛಾಮಾತ್ರ ಕಥನವನ್ನು ಯಾರು ನಂಬುವರು? ಈಶ್ವರೇಚ್ಛೆಯು ನಿತ್ಯವೋ ಅನಿತ್ಯವೋ? ನಿತ್ಯವಾಗುವ ಪಕ್ಷದಲ್ಲಿ ಯಾವಾಗಲೂ ಸೃಷ್ಟಿಯಾಗುತ್ತಿರಬೇಕು. ಪ್ರಳಯವೂ ಆಗಬಾರದು. ಮಧ್ಯದಲ್ಲಿ ಪ್ರಳಯವಾದರೆ ನಿತ್ಯವಾದ ಇಚ್ಛೆಗೆ ಭಂಗ ಬಂದಂತಾಯಿತು. ಭಂಗವಾಗದಿರುವ ಪಕ್ಷದಲ್ಲಿ ಸೃಷ್ಟಿ- ಪ್ರಳಯಗಳೆರಡೂ ಒಂದೇ ಕಾಲದಲ್ಲಿ ಆಗಬೇಕಾದೀತು. ಆಗ ಸ್ವಭಾವಸಂಕರದೋಷಪ್ರಸಂಗವು ಬರುವುದು. ಈಶ್ವರೇಚ್ಛೆಯು ಅನಿತ್ಯವಾಗುವ ಸಂದರ್ಭದಲ್ಲಿ ಅದು ಉಂಟಾಗುವುದಕ್ಕೆ ಕಾರಣವು ಯಾವುದೆಂದು ಹೇಳಬೇಕು. ಈಶ್ವರೇಚ್ಛೆಯು ಈಶ್ವರನಿಂದ ಭಿನ್ನವಾಗಿದೆಯೋ? ಅಭಿನ್ನವಾಗಿದೆಯೋ? ಭಿನ್ನವಾಗಿರುವ ಪಕ್ಷದಲ್ಲಿ ಈಶ್ವರನದೇ ಇಚ್ಚೆಯೆಂದು ಹೇಳಲಾಗುವುದಿಲ್ಲ. ಭಿನ್ನತ್ವವು ಎರಡರಲ್ಲಿಯೂ ಸಮಾನವಾಗಿದೆ. ಈಶ್ವರನಿಂದ ಇಚ್ಛೆಯು ಅಭಿನ್ನವಾಗಿರುವ ಪಕ್ಷದಲ್ಲಿ ಈಶ್ವರನಿಗೂ ಅನಿತ್ಯಪ್ರಸಂಗವು ಬರುವುದು. ಅಶರೀರನು ಇಚ್ಛಾಮಾತ್ರದಿಂದ ಕಾರ್ಯವನ್ನು ಮಾಡುತ್ತಾನೆಂಬುದಕ್ಕೆ ಯಾವ ದೃಷ್ಟಾಂತವೂ ಇಲ್ಲ. ಆದುದರಿಂದ ಇಚ್ಛಾಮಾತ್ರದಿಂದ ಪ್ರಪಂಚವನ್ನು ಸೃಷ್ಟಿಸುವುದು ಅಸಂಭವ.

ಕೃತಕೃತ್ಯನಾದ ಈಶ್ವರನಿಗೆ ಜಗತ್ತನ್ನು ನಿರ್ಮಿಸಬೇಕೆಂಬ ಇಚ್ಛೆಯು ಹೇಗೆ ಸಂಭವಿಸುತ್ತದೆ? ಕೃತಕೃತ್ಯನಿಗೆ ಯಾವ ಇಚ್ಛೆಯೂ ಉಂಟಾಗುವುದಿಲ್ಲ. ಕೃತಾರ್ಥನಲ್ಲದಿರುವ ಪಕ್ಷದಲ್ಲಿ, ಕುಂಬಾರನಂತೆ ಜಗತ್ತನ್ನು ನಿರ್ಮಿಸುವುದಕ್ಕೆ ಸಮರ್ಥನಾಗುವುದಿಲ್ಲ. ಆದ್ದರಿಂದಲೇ ಸರ್ವಶಕ್ತಿವಂತನೂ ಅಲ್ಲ.

ಅಮೂರ್ತನೂ ಕ್ರಿಯಾರಹಿತನೂ ವ್ಯಾಪಕನೂ ಆದ ಈಶ್ವರನು ಜಗತ್ತನ್ನು ಹೇಗೆ ಸೃಷ್ಟಿಸುವನು? ವಿಕಾರರಹಿತವಾದ ಈಶ್ವರನಿಗೆ ಪ್ರಪಂಚವನ್ನು ಸೃಷ್ಟಿಸಬೇಕೆಂಬ ಇಚ್ಛೆ ಉಂಟಾಗುವುದೂ ಅಸಂಗತ. ಇಚ್ಛೆ ಉಂಟಾದರೆ ಈಶ್ವರನಲ್ಲಿ ವಿಕಾರವು ಸಿದ್ಧವಾಗುವುದು.

"ತುಷ್ಯತು ದುರ್ಜನಃ" ಎಂಬ ನ್ಯಾಯದಿಂದ ಈಶ್ವರನು ಜಗತ್ತನ್ನು ಸೃಷ್ಟಿಸುತ್ತಾನೆಂದು ಒಪ್ಪಿಕೊಂಡರೂ ಹಾಗೆ ಪ್ರಪಂಚವನ್ನು ಸೃಷ್ಟಿಸುವುದರಿಂದ ಅವನಿಗಾಗುವ ಪ್ರಯೋಜನವೇನು ಎಂದು ವಿಚಾರ ಮಾಡಬೇಕು. ಲೋಕದಲ್ಲಿ ಮೂರ್ಖನು ಕೂಡ ಪ್ರಯೋಜನವಿಲ್ಲದೆ ಯಾವ ಕಾರ್ಯದಲ್ಲಿಯೂ ಪ್ರವರ್ತಿಸುವುದಿಲ್ಲ. ಈಶ್ವರನಿಗೆ ಪ್ರಪಂಚವನ್ನು ಸೃಷ್ಟಿಸುವುದರಿಂದ ಪ್ರಯೋಜನವಿದೆ ಎಂದು ಹೇಳುವುದಕ್ಕೂ ಆಗುವುದಿಲ್ಲ. ಅವನು ಕೃತಕೃತ್ಯನಾಗಿರುವುದರಿಂದ, ಧರ್ಮಾರ್ಥಕಾಮಮೋಕ್ಷ ಪುರುಷಾರ್ಥಗಳಲ್ಲಿ ಅವನಿಗೆ ಇಚ್ಛೆಯಿಲ್ಲ. ಹಾಗೆ ಇಚ್ಛೆಯೂ ಪ್ರಯೋಜನವೂ ಇಲ್ಲದೆ ಸೃಷ್ಟಿಕಾರ್ಯದಲ್ಲಿ ಏತಕ್ಕೆ ಪ್ರವರ್ತಿಸುತ್ತಾನೆ?

ಪ್ರಯೋಜನವಿಲ್ಲದೆ ಸೃಷ್ಟಿಸುವುದು ಈಶ್ವರನ ಸ್ವಭಾವವೆಂದು ಹೇಳುವ ಪಕ್ಷದಲ್ಲಿ, ಈಶ್ವರನು ಪ್ರಪಂಚವನ್ನು ನಿಷ್ಪ್ರಯೋಜನವಾಗಿ ಸೃಷ್ಟಿಸುತ್ತಾನೆಂದು ಹೇಳಿದಂತಾಯಿತು. ಇದು ಅಸಂಗತವಾದ ಮಾತಾಗಿದೆ. ಜಗತ್ತನ್ನು ಸೃಷ್ಟಿಸುವುದು ಈಶ್ವರನ ಒಂದು ಲೀಲೆಯೆಂದು ಹೇಳುವ ಪಕ್ಷದಲ್ಲಿ ಈಶ್ವರನು ಬಾಲಕನಂತೆ ಅಜ್ಞಾನಿಯೆಂದು ಹೇಳಬೇಕಾಗುವುದು. ಅಜ್ಞಾನಿಬಾಲಕನು ಆಡುವುದಕ್ಕೆ ಇಚ್ಛೆ ಪಡುತ್ತಾನೆ. ಈಶ್ವರನೂ ಅವನಂತೆಯೇ ಆದನು.

ಈಶ್ವರನು ಪ್ರಾಣಿಗಳ ಕರ್ಮವನ್ನನುಸರಿಸಿ ಶರೀರ ಮೊದಲಾದ ಸೃಷ್ಟಿಕಾರ್ಯಗಳನ್ನು ಮಾಡುತ್ತಾನೆ ಎಂದಲ್ಲಿ ಅವನು, ಬಟ್ಟೆಯನ್ನು ತಯಾರುಮಾಡುವ ಮಗ್ಗದವನಂತೆ, ಪರತಂತ್ರನಾಗುವುದರಿಂದ ಈಶ್ವರನಾಗಲಾರನು. ಮಗ್ಗದವನು ಸಾಮಗ್ರಿಗಳು ಸಿಕ್ಕಿದರೆ ಮಾತ್ರ ಬಟ್ಟೆಯನ್ನು ನೇಯುವನು. ಇಲ್ಲದಿದ್ದರೆ ಅವನಿಗೆ ಕೆಲಸಮಾಡಲಾಗುವುದಿಲ್ಲ. ಅದರಂತೆ ಈಶ್ವರನೂ ಪರತಂತ್ರನಾಗುವನು ಹಾಗೂ ಅವನು ಸರ್ವಶಕ್ತನಾಗುವುದಿಲ್ಲ.

ಶರೀರ ಮೊದಲಾದ ಸೃಷ್ಟಿ ಕಾರ್ಯಗಳಲ್ಲಿ ಜೀವಿಯ ಕರ್ಮವೇ ಕಾರಣವೆಂದಲ್ಲಿ ಈಶ್ವರನು ಕೇವಲ ನಿಮಿತ್ತಮಾತ್ರನು. ಅವನು ಕೇವಲ ಕರ್ಮದಿಂದ ಸಿದ್ಧವಾಗಿರುವ ಕಾರ್ಯವೆಂಬು ಮಾಡುತ್ತಾನೆ ಎಂದಂತಾಯಿತು. ಹೀಗೆ ಸ್ವಯಂ ಸಿದ್ಧವಾಗಿರುವ ಕಾರ್ಯಕ್ಕೆ ನಿಷ್ಕಾರಣವಾಗಿ ಈಶ್ವರನನ್ನೇಕೆ ಕರೆಯಬೇಕು.

ಪ್ರಾಣಿಗಳ ಮೇಲೆ ವಾತ್ಸಲ್ಯ ಉಳ್ಳವನಾಗಿ ಈಶ್ವರನು ಅವುಗಳನ್ನು ಅನುಗ್ರಹಿಸಬೇಕೆಂಬ ಇಚ್ಛೆಯಿಂದ ಜಗತ್ತನ್ನು ಸೃಷ್ಟಿಸುತ್ತಾನೆಂದು ಹೇಳುವ ಪಕ್ಷದಲ್ಲಿ, ದಯಾಳುವಾದ ಈಶ್ವರನು ನಿರ್ಬಾಧವೂ ಸುಖಮಯವೂ ಆದ ಸೃಷ್ಟಿಯನ್ನು ಮಾಡಬೇಕಿತ್ತು. ಸಂಸಾರದಲ್ಲಿ ಒಬ್ಬನನ್ನು ಸುಖಿಯಾಗಿ ಮತ್ತೊಬ್ಬನನ್ನು ದುಃಖಿಯನ್ನಾಗಿ ಮಾಡಬಾರದಾಗಿತ್ತು. ಜೀವನು ತಾನು ಮಾಡಿದ ತಾನು ಮಾಡಿದ ಪಾಪಕ್ಕನುಸಾರವಾಗಿ ದುಃಖವನ್ನು ಅನುಭವಿಸುತ್ತಾನೆ ಎಂದು ಹೇಳುವುದಾದರೆ ಸರ್ವಶಕ್ತನಾದ ಈಶ್ವರನು ಪಾಪವನ್ನು ಅಥವಾ ದುಃಖವನ್ನು ಹೋಗಲಾಡಿಸಿ ಸುಖವನ್ನೇ ಉಂಟು ಮಾಡಬೇಕಿತ್ತು. ಅಂತಹ ಪಾಪವನ್ನು ಮಾಡುವ ಬುದ್ಧಿಯನ್ನೂ ಉಂಟು ಮಾಡಬಾರದಾಗಿತ್ತು.

ಈಶ್ವರನು ಸೃಷ್ಟಿ ಮಾಡುವುದಕ್ಕಿಂತ ಮೊದಲು ಲೋಕವು ಇದ್ದಿತೋ? ಇಲ್ಲವೋ? ಇದ್ದಿರುವ ಪಕ್ಷದಲ್ಲಿ ಈಶ್ವರನ ಸೃಷ್ಟಿ ಪ್ರಯಾಸವು ವ್ಯರ್ಥವಾಯಿತು. ಇದ್ದುದನ್ನೇ ಮಾಡುವುದರಿಂದ ಪ್ರಯೋಜನವೇನು? ಸೃಷ್ಟಿಮಾಡುವ ಮೊದಲು ಲೋಕವು ಇಲ್ಲದಿದ್ದಪಕ್ಷದಲ್ಲಿ, ಆಕಾಶಪುಷ್ಪದಂತೆ, ಇಲ್ಲದಿದ್ದುದನ್ನು ಮಾಡುವುದೂ ಅಸಂಭವವು. ಇಲ್ಲದಿರುವ ಆಕಾಶಪುಷ್ಪವನ್ನೂ ಕತ್ತೆಯ ಕೊಡನ್ನೂ ಯಾರೂ ಮಾಡಲಾಗುವುದಿಲ್ಲ. ಅದರಂತೆ ಇಲ್ಲದಿರುವ ಲೋಕವನ್ನೂ ಈಶ್ವರನು ಮಾಡಲಾರನು.

ಸಕಲಕರ್ಮಕಲಂಕವಿಮುಕ್ತನಾದ ಮುಕ್ತಾತ್ಮನು ಲೋಕವನ್ನು ಸೃಷ್ಟಿಸುತ್ತಾನೆಂದು ಹೇಳುವುದೂ ಯುಕ್ತವಲ್ಲ. ಕೃತಕೃತ್ಯನಾಗಿ ಉದಾಸೀನನಾದ ಆ ಮುಕ್ತಾತ್ಮನಿಗೆ ಲೋಕವನ್ನು ಸೃಷ್ಟಿಸಬೇಕೆಂಬ ಇಚ್ಛೆ ಹುಟ್ಟುವುದೇ ಅಸಂಭವ. ಸಂಸಾರಜೀವನೂ ವಿಚಿತ್ರವಾದ ಲೋಕವನ್ನು ಸೃಷ್ಟಿಸುವುದು ಅಸಂಗತ. ಸಂಸಾರಿಜೀವನಿಗೆ ಅಂತಹ ಶಕ್ತಿಯೇ ಇಲ್ಲ. ಆದುದರಿಂದ ಈ ಸೃಷ್ಟಿವಾದಾವತಾರವು ಯಾವ ವಿಧದಿಂದ ವಿಚಾರಮಾಡಿದರೂ ಸಿದ್ಧವಾಗುವುದಿಲ್ಲ. ಲೋಕವನ್ನು ಮುಕ್ತನಿಂದಲೂ ಸೃಷ್ಟಿಸುವುದಕ್ಕೆ ಆಗುವುದಿಲ್ಲ. ಸಂಸಾರಿಯಿಂದಲೂ ಆಗುವುದಿಲ್ಲ. ಆದುದರಿಂದ ಲೋಕವು ಸ್ವಭಾವದಿಂದಲೇ ಇರತಕ್ಕುದಾಗಿದೆ.

ಈಶ್ವರನು ಪ್ರಜೆಗಳನ್ನೆಲ್ಲಾ ಸೃಷ್ಟಿಸಿ ಪುನಃ ಪ್ರಳಯಕಾಲದಲ್ಲಿ ನಾಶ ಮಾಡುವುದು ದೊಡ್ಡ ತಪ್ಪು. ಲೋಕದಲ್ಲಿ ಮಕ್ಕಳನ್ನು ಹುಟ್ಟಿಸಿ ಕೊಲ್ಲುವವನು ಬಹಳ ಪಾಪಿಯೆನಿಸಿಕೊಳ್ಳುತ್ತಾನೆ. ಮಕ್ಕಳಂತಿರುವ ಪ್ರಜೆಗಳನ್ನು ಸಂಹಾರಮಾಡುವುದು ಈಶ್ವರನಿಗೆ ಮಹಾಪಾಪಕ್ಕೆ ಕಾರಣವು. ಸ್ದುಷ್ಟರನ್ನು ನಿಗ್ರಹಿಸುವುದಕ್ಕೋಸ್ಕರ ಸಂಹಾರಮಾಡುತ್ತಾನೆಂದು ಹೇಳುವ ಪಕ್ಷದಲ್ಲಿ ದೈತ್ಯರೇ ಮೊದಲಾದ ಅಂತಹ ದುಷ್ಟರನ್ನು ಸೃಷ್ಟಿಸಲೇಬಾರದಾಗಿತ್ತು. ದುಷ್ಟರನ್ನು ಸೃಷ್ಟಿಸಿ ಪುನಃ ಸಂಹಾರ ಮಾಡುವಾಗ ಅವರೊಡನೆ ಶಿಷ್ಟರನ್ನು ಸಂಹರಿಸಿ ಪಾಪ ಭಾಗಿಯಾವುದಕ್ಕಿಂತಲೂ ಆ ದುಷ್ಟರನ್ನು ಸೃಷ್ಟಿಸದಿರುತ್ತಿದ್ದರೆ ಚೆನ್ನಾಗಿರುತ್ತಿರಲಿಲ್ಲವೇ? ಸರ್ವಜ್ಞನಾದ ಈಶ್ವರನಿಗೆ ಮುಂದಕ್ಕೆ ಯಾರು ದುಷ್ಟರಾಗುತ್ತಾರೆಂದು ತಿಳಿದಿರಲಿಲ್ಲವೇ?

ವಿಧಿ ಸ್ರಷ್ಟಾ, ವಿಧಾತಾ, ದೈವ, ಪೂರ್ವಕೃತಕರ್ಮ, ಈಶ್ವರ, ಈ ಶಬ್ದಗಳೆಲ್ಲ ಕರ್ಮವೆಂಬ ಬ್ರಹ್ಮನ ಪರ್ಯಾಯ ಶಬ್ದಗಳಾಗಿವೆ. ಶಬ್ದಭೇದವೇ ಹೊರತು ಅರ್ಥಭೇದವಿಲ್ಲ. ಕರ್ಮವೇ ಜಗತ್ತಿಗೆ ಕಾರಣ ಹೊರತು ಈಶ್ವರನಲ್ಲವೆಂದು ಭಾವವು.

ಅಧೋ, ಮಧ್ಯ, ಊರ್ಧ್ವ ಈ ಮೂರು ಭೇದಗಳಿಂದ ಕೂಡಿಕೊಂಡಿರುವ ಈ ಲೋಕವನ್ನು ಈಶ್ವರನು ಸೃಷ್ಟಿಸುವುದೂ ಇಲ್ಲ, ಸಂಹಾರ ಮಾಡುವುದೂ ಇಲ್ಲ. ಇದು ಸ್ವಭಾವದಿಂದಲೇ ನಿಶ್ಚಿತವಾದ ಸ್ಥಿತಿಯುಳ್ಳದ್ದಾಗಿದೆ.

Sunday, March 29, 2020

ಜೈನ ಮಹಾಪುರಾಣದಲ್ಲಿನ ಕಾಲಗಣನೆ

ಜೈನ ಮಹಾಪುರಾಣದಲ್ಲಿನ ಕಾಲಗಣನೆ


ಮುಖ್ಯಕಾಲವನ್ನು ಆಶ್ರಯಿಸಿರುವ ವ್ಯವಹಾರಕಾಲವು ಮುಖ್ಯಕಾಲದಿಂದ ಬೇರೆಯಾದುದು.
ವ್ಯವಹಾರ ಕಾಲವು ಪದಾರ್ಥಗಳಲ್ಲಾಗುವ ಹಳೆಯದು-ಹೊಸದೆಂಬ ಪರ್ಯಾಯಗಳನ್ನು
ಸೂಚಿಸುವುದು.

ವರ್ತನೆಯೇ ಲಕ್ಷಣವಾಗುಳ್ಳ ಮುಖ್ಯಕಾಲದಿಂದ ಪರಿವರ್ತನೆಯಾದ ಭೂತ-ಭವಿಷ್ಯತ್-
ವರ್ತಮಾನರೂಪವಾದ ಕಾಲವು ವ್ಯವಹಾರಕ್ಕೆ ಸಮರ್ಥವಾಗುತ್ತದೆ.

ವ್ಯವಹಾರಕಾಲದ ಭೇದಗಳೆಂದರೆ - ಸಮಯ, ಆವಲಿಕಾ, ಉಚ್ಚ್ವಾಸ, ಘಳಿಗೆ.
ಸೂರ್ಯಾದಿಜ್ಯೋತಿಶ್ಚಕ್ರದ ಪರಿಭ್ರಮಣೆಯಿಂದ ಈ ಭೇದಗಳು ಉಂಟಾಗುವುದು. ಇದನ್ನೇ
ಕಾಲಚಕ್ರವೆಂದು ಕರೆಯುತ್ತಾರೆ.

ವ್ಯವಹಾರ ಕಾಲದಲ್ಲಿ ಭವಸ್ಥಿತಿ, ಆಯುಃಸ್ಥಿತಿ, ಕಾಯಸ್ಥಿತಿ, ಕರ್ಮಸ್ಥಿತಿಗಳೆಲ್ಲವೂ ಸೇರಿಕೊಂಡು
ಅನಂತ ಸಮಯ ಉಳ್ಳದ್ದಾಗುವುದು. ಈ ಕಾಲದ ಪರಿವರ್ತನೆಯೂ ಕೂಡ ಅನಂತ
ಪ್ರಕಾರವಾದದ್ದು. 

ವ್ಯವಹಾರ ಕಾಲವನ್ನು ಉತ್ಸರ್ಪಿಣೀಭೇದ, ಅವಸರ್ಪಿಣೀಭೇದ ಎಂಬ ಭೇದಗಳಿರುವುದು.

ಉತ್ಸರ್ಪಿಣೀ ಕಾಲದಲ್ಲಿ ಮಾನವನ ಶಕ್ತಿ, ಆಯುಸ್ಸು, ಶರೀರಪ್ರಮಾಣಗಳು ವೃದ್ಧಿಯಾಗುವುದು. 
ಅವಸರ್ಪಿಣೀ ಕಾಲದಲ್ಲಿ ಇವೆಲ್ಲವೂ ಕಡಿಮೆಯಾಗುವುದು.
ಉತ್ಸರ್ಪಿಣೀ ಕಾಲವು ಹತ್ತುಕೋಟಿ ಕೋಟಿ ಸಾಗರ ಪರಿಮಿತವಾದುದು.  ಹಾಗೇ ಅವಸರ್ಪಿಣೀ
ಕಾಲವೂ ಅಷ್ಟೇ ಕಾಲ ಪರಿಮಿತವಾದುದು. ಇವೆರಡೂ ಸೇರಿ ಇಪ್ಪತ್ತು ಕೋಟಿ ಕೋಟಿ ಸಾಗರ
ಕಾಲವಾಗಿ ಇದನ್ನು ಕಲ್ಪವೆನ್ನುವರು.

ಇವೆರಡೂ ಕಾಲಗಳನ್ನು ಆರು ಭೇದಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ :

ಅವಸರ್ಪಿಣೀಭೇದಕಾಲ - ಸುಷಮಸುಷಮಾ, ಸುಷಮಾ, ಸುಷಮದುಃಷಮಾ,
ದುಃಷಮಸುಷಮಾ, ದುಃಷಮಾ, ಅತಿದುಃಷಮಾ.
ಉತ್ಸರ್ಪಿಣೀಭೇದಕಾಲ - ಅತಿದುಃಷಮಾ, ದುಃಷಮಾ, ದುಃಷಮಸುಷಮಾ,
ಸುಷಮದುಃಷಮಾ, ಸುಷಮಾ, ಸುಷಮಸುಷಮಾ.

ಮೇಲೆ ವಿವರಿಸಿದ ಕಾಲವಿಭಾಗವನ್ನು ಸಮಾ ಎನ್ನುವರು. ಕಾಲವಿಭಾಗದಲ್ಲಿನ "ಸು"
ಅಕ್ಷರವು ಶ್ರೇಷ್ಟಾರ್ಥ ಸೂಚಿಯಾದರೆ "ದುಃ" ಅಕ್ಷರವು ಹೀನಾರ್ಥವನ್ನು ಸೂಚಿಸುತ್ತದೆ.
ಹೀಗಾಗಿ ಸುಷಮಾ ಎಂದರೆ ಉತ್ತಮಕಾಲ ಹಾಗೂ ದುಃಷಮಾ ಎಂದರೆ ಕೆಟ್ಟಕಾಲ. 

ಉತ್ಸರ್ಪಿಣೀಕಾಲದಲ್ಲಿ ಆಯುಸ್ಸು ಮೊದಲಾದವುಗಳು ಹೆಚ್ಚುತ್ತಾ ಹೋಗುವುದಾದರೆ
ಅವಸರ್ಪಿಣೀಕಾಲದಲ್ಲಿ ಕಡಿಮೆ ಆಗುತ್ತಾ ಹೋಗುವುದು. 

ಕೃಷ್ಣಪಕ್ಷ, ಶುಕ್ಲಪಕ್ಷಗಳು ಒಂದರನಂತರ ಮತ್ತೊಂದು ತಿರುಗುತ್ತಿರುವಂತೆ ಆರು ಕಾಲಭೇದಗಳ
ಪರಿವರ್ತನೆಗಳಿಂದ ಕೂಡಿದ ಉತ್ಸರ್ಪಿಣೀ ಅವಸರ್ಪಿಣೀ ಕಾಲಗಳೂ ಸಹ ತಿರುಗುತ್ತಿರುತ್ತವೆ.

ಅವಸರ್ಪಿಣೀ ಕಾಲಗಣನೆ

ಸುಷಮಸುಷಮಾ - 4 ಕೋಟಿ ಕೋಟಿ ಸಂವತ್ಸರಗಳು
ಸುಷಮಾ - 3 ಕೋಟಿ ಕೋಟಿ ಸಂವತ್ಸರಗಳು
ಸುಷಮದುಃಷಮಾ - 2 ಕೋಟಿ ಕೋಟಿ ಸಂವತ್ಸರಗಳು
ದುಃಷಮಸುಷಮಾ, ದುಃಷಮಾ, ಅತಿದುಃಷಮಾ - 1 ಕೋಟಿ ಕೋಟಿ ಸಂವತ್ಸರಗಳು.
ಒಟ್ಟು 10 ಕೋಟಿ ಕೋಟಿ ಸಂವತ್ಸರಗಳು

ಉತ್ಸರ್ಪಿಣೀಕಾಲಗಣನೆ

ಅತಿದುಃಷಮಾ -   4 ಕೋಟಿ ಕೋಟಿ ಸಂವತ್ಸರಗಳು
ದುಃಷಮಾ -   3 ಕೋಟಿ ಕೋಟಿ ಸಂವತ್ಸರಗಳು
ದುಃಷಮಸುಷಮಾ - 2 ಕೋಟಿ ಕೋಟಿ ಸಂವತ್ಸರಗಳು
ಸುಷಮದುಃಷಮಾ, ಸುಷಮಾ, ಸುಷಮಸುಷಮಾ. -   1 ಕೋಟಿ ಕೋಟಿ ಸಂವತ್ಸರಗಳು
ಒಟ್ಟು 10 ಕೋಟಿ ಕೋಟಿ ಸಂವತ್ಸರಗಳು

ಅವಸರ್ಪಿಣೀಕಾಲ + ಉತ್ಸರ್ಪಿಣೀಕಾಲ = ಒಂದು ಕಲ್ಪ = 20 ಕೋಟಿ ಕೋಟಿ ಸಂವತ್ಸರಗಳು

ಮಹಾಪುರಾಣದಲ್ಲಿನ ಹದಿನಾಲ್ಕು ಮನುಗಳು
                        ಶರೀರದ ಪರಿಮಾಣ
ಪ್ರತಿಶ್ರುತಿ.           1800 ಧನುಸ್ಸಿನಷ್ಟು
ಸನ್ಮತಿ.               1500 ಧನುಸ್ಸಿನಷ್ಟು
ಕ್ಷೇಮಂಕರ.           800 ಧನುಸ್ಸಿನಷ್ಟು
ಕ್ಷೇಮಂಧರ.          750 ಧನುಸ್ಸಿನಷ್ಟು
ಸೀಮಂಕರ.          750 ಧನುಸ್ಸಿನಷ್ಟು
ಸೀಮಂಧರ.          725 ಧನುಸ್ಸಿನಷ್ಟು
ವಿಮಲವಾಹನ.     700 ಧನುಸ್ಸಿನಷ್ಟು
ಚಕ್ಷುಷ್ಮಾನ್.          675 ಧನುಸ್ಸಿನಷ್ಟು
ಯಶಸ್ವಾನ್.          650 ಧನುಸ್ಸಿನಷ್ಟು
ಅಭಿಚಂದ್ರ.           625 ಧನುಸ್ಸಿನಷ್ಟು
ಚಂದ್ರಾಭ.             600 ಧನುಸ್ಸಿನಷ್ಟು
ಮರುದ್ದೇವ.           575 ಧನುಸ್ಸಿನಷ್ಟು
ಪ್ರಸೇನಜಿತ್.          550 ಧನುಸ್ಸಿನಷ್ಟು
ನಾಭಿರಾಜ.            525 ಧನುಸ್ಸಿನಷ್ಟು
ಒಂದು ಧನುಸ್ಸಿನ ಉದ್ದವು ಸಾಮಾನ್ಯವಾಗಿ 5 ಅಡಿ ಇರುವುದು.

ಮನುಗಳ ಆಯುಷ್ಯವನ್ನು ನಿಶ್ಚಯಿಸಿರುವುದು ಹೀಗೆ :-
84 ಲಕ್ಷ ವರ್ಷ = ಒಂದು ಪೂರ್ವಾಂಗ
84 X 84 ಲಕ್ಷ ವರ್ಷ = ಒಂದು ಪೂರ್ವ
ಪೂರ್ವ X 1 ಕೋಟಿ = ಒಂದು ಪೂರ್ವ ಕೋಟಿ 
ಪೂರ್ವ X 84 = ಪರ್ವಾಂಗ
ಪರ್ವಾಂಗ X ಪೂರ್ವಾಂಗ = ಒಂದು ಪರ್ವ
ಪರ್ವ X 84 = ನವುತಾಂಗ
ನವುತಾಂಗ X 84 = ನವುತ
ನವುತ X 84 = ಕುಮುದಾಂಗ
ಕುಮುದಾಂಗ X 84 = ಕುಮುದ
ಕುಮುದ X 84 = ಪದ್ಮಾಂಗ
ಪದ್ಮಾಂಗ X 84 = ಪದ್ಮ
ಪದ್ಮ X 84 = ನಲಿನಾಂಗ
ನಲಿನಾಂಗ X 84 = ನಲಿನ

ಹೀಗೆಯೇ ಒಂದೊಂದನ್ನೂ 84ರಿಂದ ಗುಣಿಸುತ್ತಾ ಹೋದಲ್ಲಿ ಬರುವ ವರ್ಣನೆಗಳೆಂದರೆ -
ಕಮಲಾಂಗ, ಕಮಲ, ತುಟ್ಯಂಗ, ತುಟಿಕ, ಅಟಟಾಂಗ, ಅಟಟ, ಅಮಮಾಂಗ, ಅಮಮ,
ಹಾಹಾಂಗ, ಹಾಹಾ, ಹೂಹ್ವಂಗ, ಹೂಹೂ, ಲತಾಂಗ, ಲತಾ, ಮಹಾಲತಾಂಗ, ಮಹಾಲತಾ,
ಶಿರಃಪ್ರಕಂಪಿತ, ಹಸ್ತಪ್ರಹೇಲಿತ, ಅಚಲ. 

ಅವಸರ್ಪಿಣೀ ಕಾಲದಲ್ಲಿನ ಪರಿಸ್ಥಿತಿಗಳು

ಅವಸರ್ಪಿಣೀ ಕಾಲದಲ್ಲಿ ಮೊದಲು ಸುಷಮಸುಷಮಾ ಕಾಲವು ಭರತಖಂಡದಲ್ಲಿ
ಪ್ರಾರಂಭವಾಗಿತ್ತು. ಆ ಕಾಲದಲ್ಲಿ ಭೂಮಿಯು ಯಾವಸ್ಥಿತಿಯಲ್ಲಿತ್ತು ಹಾಗೂ ಮನುಷ್ಯರ
ಜೀವನ ಶೈಲಿ, ಆಯುಷ್ಯ ಇತರೆ ಸ್ಥಿತಿಗಳು ಹೇಗಿತ್ತು ಎಂಬುದನ್ನು ವೃಷಭಜಿನೇಶ್ವರರು ವಿವರಿಸಿದ್ದಾರೆ.
ಅದನ್ನು ನೋಡೋಣ:

4 ಕೋಟಿ ಕೋಟಿ ಕಾಲದವರೆಗೂ ಸುಷಮಸುಷಮಾ ಕಾಲವಿದ್ದಿತು. ದೇವಕುರು,
ಉತ್ತಮಕುರುಗಳೆಂಬ ಉತ್ತಮವಾದ ಭೋಗ ಭೂಮಿಗಳಲ್ಲಿ ಯಾವ ಸ್ಥಿತಿ ಇತ್ತೋ ಅದೇ ಸ್ಥಿತಿಯು
ಅವಸರ್ಪಿಣೀ ಕಾಲದಲ್ಲಿ ಇದ್ದಿತು. ಆಗ ಮನುಷ್ಯರ ಆಯುಸ್ಸು 3 ಪಲ್ಯೋಪಮದಷ್ಟಿತ್ತು. ಶರೀರವು
6000 ಧನುಸ್ಸಿನಷ್ಟು ಉದ್ಧವಾಗಿತ್ತು. ವಜ್ರಮಯವಾದ ಮೂಳೆಗಳಿದ್ದು ಸುಂದರ ಹಾಗೂ ಸೌಮ್ಯ
ಮತ್ತು ಮನೋಹರವಾಗಿದ್ದರು. ಇಡೀ ಶರೀರವು ಕಾಯಿಸಿದ ಚಿನ್ನದಂತೆ ಪ್ರಕಾಶಿಸುತ್ತಿತ್ತು. ಸದಾ ಕಿರೀಟ,
ಕರ್ಣಕುಂಡಲ, ರತ್ನಾಹಾರ, ಉಡುದಾರ, ಕೈಗಳಿಗೆ ಕಡಗ, ಭುಜಕೀರ್ತಿ, ತೋಳುಬಳೆಗಳನ್ನೂ ಮತ್ತು
ಯಜ್ನೋಪವೀತವನ್ನೂ ಧರಿಸುತ್ತಿದ್ದರು. ಇವರೆಲ್ಲಾ ಧೈರ್ಯಶಾಲಿ, ಬಲಶಾಲಿಗಳಾಗಿದ್ದು ಮಹಾ
ತೇಜಸ್ವಿಗಳಾಗಿ ಪೂಜ್ಯರೆನಿಸಿಕೊಳ್ಳುತ್ತಿದ್ದರು. ಮೂರು ದಿನಕ್ಕೊಮ್ಮೆ ಬೋರೆಕಾಯಿಯಷ್ಟು ಗಾತ್ರದ
ಕಲ್ಪವೃಕ್ಷದ ಆಹಾರವನ್ನು ಸೇವಿಸುತ್ತಿದ್ದರು. ಅವರಿಗೆ ರೋಗ, ಮಲಮೂತ್ರ ಬಾಧೆಗಳಿರಲಿಲ್ಲ. ಅಕಾಲ
ಮರಣವಿಲ್ಲದೆ ತಮ್ಮ ಆಯುಸ್ಸು ಪೂರ್ತಿಯಾಗುವವರೆಗೂ ಬದುಕುತ್ತಿದ್ದರು. ಆಗಿನ ಸ್ತ್ರೀಯರೂ
ಪುರುಷರಷ್ಟೇ ಶರೀರ ಪ್ರಮಾಣ, ಆಯುಸ್ಸು ಇದ್ದು ಅವರು ಪುರುಷರಲ್ಲಿ ಅನುರಕ್ತರಾಗಿ
ಪ್ರಕಾಶಿಸುತ್ತಿದ್ದರು. ಈ ಕಾಲದಲ್ಲಿ ಕಲ್ಪವೃಕ್ಷಗಳು ಯಥೇಷ್ಟವಾಗಿ ಅಭಿವೃದ್ಧಿಗೊಳ್ಳುತ್ತಿದ್ದವು. ಹೀಗೆ ಈ
ಕಾಲದ ಜನಗಳು ಬಹುಕಾಲ ಸುಖದಿಂದ ಜೀವಿಸಿ ಆಯುಷ್ಯ ಪೂರ್ತಿಯಾದ ನಂತರ ಮೇಘಗಳು
ಬಯಲಾಗುವಂತೆ ಮರಣಿಸುತ್ತಿದ್ದರು. ಪುರುಷರು ಅಕಳಿಕೆಯಿಂದಲೂ ಶರೀರತ್ಯಾಗ ಮಾಡಿದರೆ,
ಸ್ತ್ರೀಯರು ಸೀನಿನಿಂದ ಶರೀರತ್ಯಾಗಮಾಡುತ್ತಿದ್ದರು. 

ಎರಡನೇ ಕಾಲವಾದ ಸುಷಮಾ ಕಾಲದಲ್ಲಿ ಆ ಕಾಲವು 3 ಕೋಟಿಕೋಟಿ ಸಂವತ್ಸರ. ಆಗಿನ
ಜನಗಳಿಗೆ ಎರಡು ಪಲ್ಯೋಮಗಳಷ್ಟು ಆಯುಸ್ಸು ಇದ್ದು ಅವರ ಶರೀರವು 4000
ಧನುಸ್ಸಿನಷ್ಟು ಎತ್ತರವಾಗಿತ್ತು. ಅವರು ಎರಡು ದಿನಕ್ಕೊಮ್ಮೆ ತಾರೆಕಾಯಿಯಷ್ಟು ಗಾತ್ರದ
ಅನ್ನವನ್ನು ಕಲ್ಪವೃಕ್ಷದಿಂದ ಉಣ್ಣುತ್ತಿದ್ದರು. 

ಮೂರನೇ ಕಾಲವಾದ ಸುಷಮದುಃಷಮಾ ಕಾಲವು 2 ಕೋಟಿಕೋಟಿ ಸಂವತ್ಸರ. ಆ ಕಾಲದ
ಜನರು ಒಂದು ಪ್ಲಯೋಮಕಾಲ ಜೀವಿಸುತ್ತಿದ್ದರು. ಅವರ ಶರೀರವು ಒಂದು ಹರದಾರಿ
ಪ್ರಮಾಣದಷ್ಟು ಎತ್ತರವಾಗಿತ್ತು. ಒಂದು ದಿನ ಬಿಟ್ಟು ಒಂದು ನೆಲ್ಲಿಕಾಯಿ ಗಾತ್ರದ ಭೋಜನವನ್ನು
ಮಾಡುತ್ತಿದ್ದರು. 

ನಾಲ್ಕನೇ ಕಾಲವಾದ ದುಃಷಮಸುಷಮಾ, ದುಃಷಮಾ, ಅತಿದುಃಷಮಾ ಕಾಲದಲ್ಲಿ ಒಂದು
ಕೋಟಿಕೋಟಿ ಸಂವತ್ಸರಗಳು. ಈ ಕಾಲದ ಜನಗಳ ಆಯುಸ್ಸು ಒಂದು ಪಲ್ಯೋಯೋಪಮದ
ಹತ್ತನೇ ಒಂದು ಭಾಗದಷ್ಟಿತ್ತು. ಅವರ ಶರೀರವು 1800 ಧನುಸ್ಸಿನಷ್ಟು ಎತ್ತರವಾಗಿತ್ತು.  

ದುಃಷಮಸುಷಮಾ ಕಾಲದ ಜನಗಳು ಹಿಂದೆದೂ ಕಾಣದಿದ್ದ ಸೂರ್ಯಚಂದ್ರರನ್ನು ನೋಡಿ
ಭಯಭೀತರಾದರು. ಆ ಯುಗದಲ್ಲಿನ ಪ್ರತಿಶ್ರುತಿ ಮನುವು ಜ್ಯೋತಿರಂಗಕಲ್ಪವೃಕ್ಷಗಳ ಪ್ರಭೆಯು
ಕಡಿಮೆಯಾಗುತ್ತಿರುವುದರಿಂದ ಸೂರ್ಯಚಂದ್ರರು ಕಾಣುತ್ತಿದ್ದಾರೆ, ಅದರಿಂದ ಏನೂ ಭಯಪಡ
ಬೇಕಿಲ್ಲವೆಂದು ಜನರನ್ನು ಸಮಾಧಾನಪಡಿಸಿದನು. 

ಎರಡನೇ ಮನು ಸನ್ಮತಿಯ ಕಾಲದಲ್ಲಿ ಜನಗಳು ರಾತ್ರೆಯವೇಳೆ ನಕ್ಷತ್ರಗಳನ್ನು ನೋಡಿ
ಗಾಭರಿಯಾದರು. ಮನುವು ಜನಗಳಿಗೆ ಸಮಾಧಾನ ಮಾಡಿ ನಕ್ಷತ್ರಗಳ ಬಗ್ಗೆ ತಿಳುವಳಿಕೆಯನ್ನು
ನೀಡಿದನು. 

ಮೂರನೇ ಮನು ಕ್ಷೇಮಂಕರನ ಕಾಲದಲ್ಲಿ ಪ್ರಜೆಗಳು ತಮ್ಮ ಕೈಗಳಿಂದ ಲಾಲನೆ ಪಾಲನೆ
ಮಾಡುತ್ತಿದ್ದ ಶಾಂತಸ್ವಭಾವದ ಸಿಂಹ ಮೊದಲಾದ ಮೃಗಗಳು ವಿಕಾರವನ್ನು ಹೊಂದಿ ಬಾಯಿ
ತೆಗೆದು ಭಯಂಕರವಾದ ಶಬ್ದವನ್ನು ಮಾಡಲು ಪ್ರಾರಂಭಿಸಿತು. ಆಗ ಮನುವು ಈ ವಿಧದ
ಪ್ರಾಣಿಗಳು ಈಗ ಕಾಲದೋಷದಿಂದ ವಿಕಾರವನ್ನು ಹೊಂದಿವೆಯೆಂದೂ ಅವುಗಳನ್ನು
ದೂರಮಾಡುವಂತೆ ತಿಳಿಸಿದನು.

ಐದನೇ ಮನು ಸೀಮಂಕರನ ಕಾಲದಲ್ಲಿ ಕಲ್ಪವೃಕ್ಷಗಳು ಕಡಿಮೆಯಾಗಿ ಸ್ವಲ್ಪ ಫಲಗಳನ್ನು
ಕೊಡುವುದಕ್ಕೆ ಪ್ರಾರಂಭಿಸಿದಾಗ ಕಲ್ಪವೃಕ್ಷಗಳ ಒಡೆತನದ ಸಲುವಾಗಿ ಜನಗಳಲ್ಲಿ ವಿವಾದ
ಹುಟ್ಟಿಕೊಂಡಿತು. ಆಗ ಮನುವು ಕಲ್ಪವೃಕ್ಷಗಳಿಗೆ ಬೇಲಿಯನ್ನು ನಿರ್ಮಿಸಿ ಜನಗಳ
ಗುಂಪುಗಳಿಗೆ ಸಮನಾಗಿ ಹಂಚಿಕೊಟ್ಟನು.

7ನೇ ಮನು ವಿಮಲವಾಹನನ ಕಾಲದಲ್ಲಿ ತನ್ನ ಪ್ರಜೆಗಳಿಗೆ ಆನೆ, ಕುದುರೆ ಮೊದಲಾದ ವಾಹನಗಳ
ಸವಾರಿಯನ್ನೂ, ಕೊಡಲಿ, ಅಂಕುಶ ಇತ್ಯಾದಿಗಳ ಉಪಯೋಗವನ್ನೂ ಉಪದೇಶ ಮಾಡಿದನು.

8ನೇ ಮನು ಚಕ್ಷುಷ್ಮಾನನ ಕಾಲದಲ್ಲಿ ಪ್ರಜೆಗಳು ಮೊದಲಬಾರಿಗೆ ಒಂದು ಕ್ಷಣ ತಮ್ಮ ಮಕ್ಕಳನ್ನು
ನೋಡಿ ಭಯಭೀತರಾದರು. ಅಲ್ಲಿಯವರೆಗೂ ಜನಗಳು ಮಕ್ಕಳು ಜನಿಸುತ್ತಿದ್ದಂತೆ ಅವುಗಳನ್ನು
ನೋಡದೆ ಮರಣಿಸುತ್ತಿದ್ದರು. ಆಗ ಮನುವು, "ಆ ಮಕ್ಕಳು ನಿಮ್ಮ ಮಕ್ಕಳೇ," ಎಂದು ಸಮಾಧಾನ
ಪಡಿಸಿದನು.
ಪ್ರಜೆಗಳು ತಮ್ಮ ಮಕ್ಕಳನ್ನು ಕೆಲವು ಕ್ಷಣಕಾಲದಷ್ಟು ಹೊತ್ತು ದರ್ಶನ ಮಾಡುತ್ತಿದ್ದರು.

9ನೇ ಮನು ಯಶಸ್ವಾನನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳನ್ನು ನೋಡಿ
ಆಶೀರ್ವಾದವನ್ನು ಮಾಡಿ ಸ್ವಲ್ಪ ಹೊತ್ತು ಬದುಕಿದ್ದು ನಂತರ ಮರಣಿಸುತ್ತಿದ್ದರು. 

10ನೇ ಮನು ಅಭಿಚಂದ್ರನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳ ಮುಖವನ್ನು ಕುತೂಹಲದಿಂದ
ನೋಡಿ, ಅವರಿಗೆ ಆಶೀರ್ವಾದ ಮಾಡಿ, ರಾತ್ರೆಯ ಕಾಲದಲ್ಲಿ ಅವರಿಗೆ ಚಂದ್ರದರ್ಶನವನ್ನು ಮಾಡಿಸಿ
ಅವರೊಂದಿಗೆ ಆಟವಾಡುತ್ತಿದ್ದರು. 

11ನೇ ಮನು ಚಂದ್ರಾಭನ ಕಾಲದಲ್ಲಿ ಪ್ರಜೆಗಳು ತಮ್ಮ ಮಕ್ಕಳೊಂದಿಗೆ ಕೆಲಕಾಲ ಜೀವಿಸುತ್ತಿದ್ದರು. 

12ನೇ ಮನು ಮರುದ್ದೇವನ ಕಾಲದಲ್ಲಿ ಪ್ರಜೆಗಳು ಮಕ್ಕಳ ಮುಖವನ್ನು ನೋಡಿ ಆ ಮಕ್ಕಳ
ಆಲಿಂಗನದ ಸಂತೋಷವನ್ನು ಅನುಭವಿಸುತ್ತಿದ್ದರು. ಈ ಮನುವು ತನ್ನ ಕಾಲದಲ್ಲಿ ನೀರಿನಲ್ಲಿ ಸಂಚಾರ
ಮಾಡಲು ದೋಣಿ, ಹಡಗುಗಳನ್ನು ನಿರ್ಮಿಸಲು ಪ್ರಜೆಗಳಿಗೆ ಹೇಳಿಕೊಟ್ಟನು ಹಾಗೂ ಗಿರಿ
ದುರ್ಗಗಳನ್ನು ಹತ್ತಲು ಏಣಿ ಪದ್ಧತಿಯನ್ನು ಮಾಡಿಸಿದನು. ಇವನ ಕಾಲದಲ್ಲಿಯೇ ಸಣ್ಣ ಪರ್ವತಗಳು,
ಸಣ್ಣನದಿಗಳೂ, ಉಪಸಮುದ್ರಗಳೂ ಹುಟ್ಟಿದವು. 

13ನೇ ಮನು ಪ್ರಸೇನಾಜಿತ್ ಕಾಲದಲ್ಲಿ ಮಕ್ಕಳು ಜರಾಯುಪಟಲದಿಂದ ಅಚ್ಚಾದಿತವಾಗಿ
ಹುಟ್ಟುತ್ತಿದ್ದವು. ಆಗ ಮನುವು ಜರಾಯುಪಟಲದ ಚೀಲದಿಂದ ಮಕ್ಕಳನ್ನು ಬೇರ್ಪಡಿಸುವ
ವಿಧಾನವನ್ನು ಜನಗಳಿಗೆ ಹೇಳಿಕೊಟ್ಟನು. 

14ನೇ ಮನು ನಾಭಿರಾಜನ ಕಾಲದಲ್ಲಿ ಮಕ್ಕಳು ಹುಟ್ಟುವಾಗ ಹೊಕ್ಕಳಲ್ಲಿ ದಾರವು
ಕಾಣಿಸತೊಡಗಿತು. ಮನುವು ಅದನ್ನು ಕತ್ತರಿಸಿ ತೆಗೆಯುವ ಉಪಾಯವನ್ನು ಪ್ರಜೆಗಳಿಗೆ
ಹೇಳಿಕೊಟ್ಟನು. 

14ಜನ ಮನುಗಳಲ್ಲಿ ಮೊದಲ 5 ಮನುಗಳು ತಪ್ಪು ಮಾಡಿದ ಪ್ರಜೆಗಳಿಗೆ "ಹಾ" ಎಂಬ
ಶಿಕ್ಷೆಯನ್ನು ವಿಧಿಸುತ್ತಿದ್ದರೆ, ನಂತರದ 5 ಮನುಗಳು "ಹಾ ಮಾ" ಎಂಬ ಶಿಕ್ಷೆಯನ್ನು
ವಿಧಿಸುತ್ತಿದ್ದರು. ಮಿಕ್ಕ 4 ಮನುಗಳು "ಹಾ ಮಾ ಧಿಕ್" ಎಂಬ ಶಿಕ್ಷೆಯನ್ನು ವಿಧಿಸುತ್ತಿದ್ದರು. 

ನಂತರದಲ್ಲಿ ಬಂದ ಭರತ ಚಕ್ರವರ್ತಿಯು ಅಧಿಕವಾಗಿ ತಪ್ಪುಮಾಡಿದವರಿಗೆ ವಧೆ, ಬಂದಿಖಾನೆ
ಮುಂತಾದ ಶಾರೀರಿಕ ಶಿಕ್ಷೆಗಳನ್ನು ವಿಧಿಸುತ್ತಿದ್ದನು. 

ಮೂಲ: ಭಗವಜ್ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯ ವಿರಚಿತ ಮಹಾಪುರಾಣ.









Wednesday, March 18, 2020

ಧರ್ಮಶ್ರವಣದ ಶ್ರೋತೃಗಳು

ಧರ್ಮಶ್ರವಣದ ಶ್ರೋತೃಗಳು


ಧರ್ಮಶ್ರವಣದಲ್ಲಿ ಯಾರು ಅಸಕ್ತರಾಗಿರುತ್ತಾರೋ ಅವರನ್ನೆಲ್ಲಾ ಶ್ರೋತೃಗಳೆಂದು ಜ್ಞಾನಿಗಳು
ಹೇಳುವರು. ಅವರಲ್ಲಿ ಉತ್ತಮರು, ಮಧ್ಯಮರು ಹಾಗೂ ನಿಕೃಷ್ಟರು ಎಂಬ ಶ್ರೋತೃಗಳಿರುವರು.
ಅದನ್ನು ಅರಿಯಲು ಮುಂದಿನ ಕಾಲ್ಪನಿಕ ದೃಷ್ಟಾಂತವನ್ನು ಗಮನಿಸೋಣ:

ಮಣ್ಣು, ವಂದ್ರೀ, ಆಡು, ಬೆಕ್ಕು, ಗಿಣಿ, ಬಾಚಣಿಗೆ, ಕಲ್ಲು, ಸರ್ಪ, ಗೋವು, ಹಂಸಪಕ್ಷಿ, ಕೋಣ,
ತೂತುಗಡಿಗೆ, ಕಚ್ಚುವ ನೊಣ ಮತ್ತು ಜಿಗಣೆ - ಈ 15 ವಸ್ತುಗಳ ಸ್ವಭಾವದಂತಿರುವ ಶ್ರೋತೃಗಳಲ್ಲಿ ಪ್ರಮುಖವಾಗಿ
ಉತ್ತಮ, ಮಧ್ಯಮ ಮತ್ತು ಅಧಮ ಎಂಬ ಮೂರು ಭೇದಗಳಿವೆ. ಇದಲ್ಲದೇ ಇನ್ನೂ ವಿಲಕ್ಷಣವಾದ ಶ್ರೋತೃಗಳೂ
ಇರುತ್ತಾರೆ.
ಗೋವು, ಹಂಸಪಕ್ಷಿ ಇವುಗಳಿಗೆ ಸಮಾನರಾದವರು ಉತ್ತಮ ಶ್ರೋತೃಗಳು; ಗೋವು
ಸರೋವರದ ನೀರನ್ನು ಕದಡದೆ ಮೇಲಿನ ತಿಳಿನೀರನ್ನೇ ಕುಡಿಯುತ್ತವೆ. ಹಂಸಪಕ್ಷಿಯು
ನೀರನ್ನು ಬಿಟ್ಟು ಹಾಲನ್ನು ಮಾತ್ರ ಕುಡಿಯುವುದು. ಹಾಗೆ ಉತ್ತಮ ಶ್ರೋತೃಗಳು ದೋಷಗಳನ್ನು
ಬಿಟ್ಟು ಒಳ್ಳೆಯ ಗುಣಗಳನ್ನು ಮಾತ್ರ ಸ್ವೀಕರಿಸುತ್ತಾರೆ.

ಮಣ್ಣು, ಗಿಣಿ ಇವುಗಳಿಗೆ ಸಮಾನರಾದವರು ಮಧ್ಯಮ ಶ್ರೋತೃಗಳು - ಮಣ್ಣನ್ನು ನೆನೆಯಿಸಿದರೆ
ಸ್ವಲ್ಪಹೊತ್ತು ಮೃದುವಾಗಿ ಪುನಃ ಶುಷ್ಕವಾಗುವುದು. ಗಿಳಿಯು ಹೇಳಿಕೊಟ್ಟಷ್ಟು ಮಾತನ್ನು ಮಾತ್ರ
ಹೇಳುತ್ತದೆ. ಇಂತಹ ಸ್ವಭಾವದವರು ಮಧ್ಯಮರು.

ಮಿಕ್ಕ ಪದಾರ್ಥಗಳ ಸ್ವಭಾವದಂತೆ ಸ್ವಭಾವವುಳ್ಳವನು ಅಧಮ ಶ್ರೋತೃ ಎಂದು ಜ್ಞಾನಿಗಳು
ಹೇಳುವರು. 

ದರ್ಪಣ, ತಕ್ಕಡಿ, ದಂಡ, ಒರೆಗಲ್ಲು ಇವುಗಳಿಗೆ ಸಮಾನರಾದ ಶ್ರೋತೃಗಳು ರತ್ನಗಳನ್ನು
ಪರೀಕ್ಷೆಮಾಡುವುದಕ್ಕೆ ಅಧಿಕಾರಿಗಳು.

ಶ್ರೋತೃವು ಕಥಾಶ್ರವಣದಿಂದ ಲೌಕಿಕ ಫಲವನ್ನು ನಿರೀಕ್ಷಿಸಬಾರದು. ಕಥೆಯನ್ನು
ಹೇಳುವವನು ಶ್ರೋತೃಗಳಿಂದ ಸತ್ಕಾರವನ್ನೂ ಹಣವನ್ನೂ ಮೊದಲಾದ ಯಾವ
ಪ್ರತಿಫಲವನ್ನೂ ನಿರೀಕ್ಷಿಸಕೂಡದು. 

ಶ್ರೋತೃವು ಧರ್ಮಕಥೆಯನ್ನು ಕೇಳಲು ಇಚ್ಛಿಸುವ ಗುಣದಿಂದ ಪ್ರಶಂಸಿಸಲ್ಪಡುತ್ತಾನೆ.
ಕಥೆಯನ್ನು ಹೇಳುವವನು ವಾತ್ಸಲ್ಯಾದಿ ಗುಣಗಳಿಂದ ಭೂಷಿತನಾಗಿರಬೇಕು


ಶ್ರೋತೃವಿಗೆ ಸತ್ಕಥೆಯನ್ನು ಕೇಳುವುದರಿಂದ ಉಂಟಾಗುವ ಪುಣ್ಯದಿಂದ ಸಾಂಸಾರಿಕ
ಸುಖದೊಡನೆ ಮೋಕ್ಷಸುಖವೂ ದೊರಕುವುದು.

ಮೂಲ : ಮಹಾಪುರಾಣ

Tuesday, March 17, 2020

ಕವಿಯ ಕವಿತಾಶಕ್ತಿ

ಕವಿಯ ಕವಿತಾಶಕ್ತಿ

ಕವಿಯ ಕವಿತ್ವ ರಚನೆಯ ಶಕ್ತಿಯು ಅಥವಾ ಶಬ್ದಾರ್ಥ ರಚನೆಯ ಕಾರ್ಯವು ಕಾವ್ಯವೆಂದು
ಕವಿತೆಯನ್ನು ಅರಿತವರು ಹೇಳುವರು. ಅಂತಹ ಕಾವ್ಯವು ಪ್ರಸಿದ್ಧವಾದ ಅರ್ಥವುಳ್ಳದ್ದೂ,
ಅಲಂಕಾರದಿಂದ ಕೂಡಿದ್ದೂ ಹಾಗೂ ರಾಸಾಲಂಕಾರದಿಂದ ಸಂಕುಚಿತವಾಗಿಲ್ಲದ್ದೂ
ಆಗಿರಬೇಕು.


ಕೆಲವರು ಕವಿಯ ವಾಕ್ಯಗಳಿಗೆ ಸುಂದರವಾದ ಅರ್ಥವನ್ನು ಅಲಂಕಾರವೆನ್ನುವರು, ಮತ್ತೆ ಕೆಲವರು
ವಿದ್ವಾಂಸರ ಮನಸ್ಸಿಗೆ ಸಂತೋಷವನ್ನುಂಟುಮಾಡುವ ಪದಗಳನ್ನು ಅಲಂಕಾರವೆನ್ನುವರು.
ಇವೆರಡನ್ನೂ ಒಪ್ಪಬಹುದು.


ಅಲಂಕಾರದಿಂದ ಕೂಡಿದ ಶೃಂಗಾರಾದಿ ರಸಭಾರಿತವೂ ಸಾಮ್ಯವುಳ್ಳದ್ದೂ ಬೇರೆಯವರ
ಅಭಿಪ್ರಾಯರಹಿತವಾದ ಸತ್ಪುರುಷರ ಕಾವ್ಯವು ಸರಸ್ವತಿಯ ವದನದಂತಿರುತ್ತದೆ.


ಯಾರು ಉತ್ತಮವಾದ ಪದರಚನೆಯುಳ್ಳ, ಆಲಿಸುವುದಕ್ಕೆ ಮಧುರವಾಗಿದ್ದು ಹಾಗೂ
ಅನಂದವನ್ನುಂಟುಮಾಡುವ ಅರ್ಥಗಳಿಂದ ಕೂಡಿದ ಕಾವ್ಯವನ್ನು ರಚಿಸುವರೋ ಅವರೇ
ಮಹಾಕವಿಗಳು.


ಕೆಲವು ಪದ್ಯಗಳನ್ನು ಎಲ್ಲ ಕವಿಗಳೂ ಕಷ್ಟಪಟ್ಟು ರಚಿಸುತ್ತಾರೆ. ಆದರೆ ಪೂರ್ವಾಪರ
ಸಂಬಂಧಗಳಿಂದ ಕವಿತೆಯನ್ನು ರಚಿಸುವುದು ಕಷ್ಟ.


ವಚನವೆಂಬ ದೊಡ್ಡ ಮಾರ್ಗದಲ್ಲಿ ಸಂಚರಿಸುವವನು ಅರ್ಥವೆಂಬ ಅರಣ್ಯದಲ್ಲಿ ಸಂಚರಿಸಿ
ಖಿನ್ನನಾದ ಕವಿಯು ವಿಶ್ರಮಿಸಲು ಮಹಾಕವಿಗಳೆಂಬ ವೃಕ್ಷವನ್ನು ಆಶ್ರಯಿಸಲೇ ಬೇಕು.


ಬುದ್ದಿ ಅಥವಾ ಪ್ರತಿಭೆ ಎಂಬ ಬೇರುಳ್ಳ, ಗುಣವೆಂಬ ಕಾಂಡವುಳ್ಳ, ವಚನವೆಂಬ ಬಳ್ಳಿಗಳಿಂದ
ಪ್ರಕಾಶಿಸುವ ಮಹಾಕವಿ ಎಂಬ ವೃಕ್ಷವು ಹೂವಿನ ಗೊಂಚಲನ್ನು ಧರಿಸುತ್ತದೆ.


ಬುದ್ಧಿಯೆಂಬ ದಡ ಉಳ್ಳವನೂ, ಉಪಮಾದಿ ಅಲಂಕಾರಗಳೆಂಬ ಮಾಲೆಯುಳ್ಳವನೂ,
ಔದಾರ್ಯ ಎಂಬ ಗುಣಗಳೆಂಬ ರತ್ನಗಳನ್ನು ಉಳ್ಳವನೂ, ಗುರುಪರಂಪರಾರೂಪವಾದ
ಮಹಾಪ್ರವಾಹ ಉಳ್ಳವನೂ ಆದ ಕವಿಯು ಸಮುದ್ರದಂತೆ ಆಚರಿಸುತ್ತಾನೆ. 

ಮೂಲ : ಮಹಾಪುರಾಣ

ಧರ್ಮೋ ರಕ್ಷತಿ ರಕ್ಷಿತಃ

धर्मो रक्षति रक्षितः

ಯಾವುದೇ ಸಮಾಜದಲ್ಲಿ ಅದರ ಅಸ್ತಿತ್ವವು ಜಗತ್ತಿನಲ್ಲಿ ಸದಾ ಕಾಲ ಇರಬೇಕಾದರೆ, ಅದರ ಸಾಹಿತ್ಯವು ಶಾಶ್ವತವಾಗಿರಬೇಕು. ಧರ್ಮವನ್ನು ಅವಲಂಬಿಸಿದವರು ನಾಶವಾದರೂ ಆ ಧರ್ಮವನ್ನು ಬೋಧಿಸುವ ಸಾಹಿತ್ಯವು ನಶಿಸಿಹೋಗದೇ ಇದ್ದಲ್ಲಿ ಅದರ ಪ್ರಭಾವದಿಂದ ಹೊಸದಾಗಿ ಧರ್ಮವನ್ನು ಅವಲಂಬಿಸುವವರು ಉದಯಿಸಬಹುದು. ಆದರೆ ಸಾಹಿತ್ಯವು ನಾಶವಾಗಿ ಧರ್ಮವನ್ನು ಅನುಸರಿಸುವವರು ಇದ್ದರೂ ಅವರಿರುವ ಸಮಯದವರೆಗೂ ಮಾತ್ರ ಧರ್ಮವು ಇದ್ದು ಅವರ ಕಾಲಾನಂತರ ಅವರೊಂದಿಗೇ ಧರ್ಮವೂ ನಾಶವಾಗುವುದು. ಒಂದು ಮರದಲ್ಲಿ ಬಿಟ್ಟ ಹಣ್ಣುಗಳು ನಾಶವಾದರೂ ಮರವಿದ್ದಲ್ಲಿ ಮತ್ತೆ ಹಣ್ಣುಗಳು ಉತ್ಪತ್ತಿಯಾಗಬಹುದು. ಹಣ್ಣುಗಳಿದ್ದು ಮರವೇ ನಾಶವಾದಲ್ಲಿ ಅವುಗಳು ಮುಗಿದಮೇಲೆ ಮತ್ತೆ ಹಣ್ಣುಗಳು ದೊರೆಯುವುದಿಲ್ಲ. ಮತ್ತೊಂದು ಉದಾಹರಣೆಯೆಂದರೆ ರತ್ನಗಳು ನಾಶವಾದರೂ ಅವುಗಳಿದ್ದ ಗಣಿಯು ನಾಶವಾಗದಿದ್ದರೆ ಮತ್ತೆ ರತ್ನಗಳನ್ನು ಹೊರತೆಗೆಯಬಹುದು. ಗಣಿಯೇ ನಾಶವಾದಲ್ಲಿ ರತ್ನಗಳ ಉತ್ಪತ್ತಿಯು ಅಸಾಧ್ಯ. 
ಆದ್ದರಿಂದ ಧರ್ಮದ ಅಭಿಮಾನಿಯು ತನ್ನ ಧರ್ಮದ ಸ್ಥಿರತೆಗೆ ಮೂಲಕಾರಣವಾದ ಸಾಹಿತ್ಯಕ್ಕೆ ಲೋಪವಾಗದಂತೆ ನೋಡಿಕೊಳ್ಳುವುದೇ ಅವನ ಪರಮ/ಪ್ರಥಮ ಕರ್ತವ್ಯ. ಇದೇ ಅವನು ಮಾಡುವ ಧರ್ಮರಕ್ಷಣೆಯ ಕಾರ್ಯ. धर्मो रक्षति रक्षितः


ಮೂಲ: ಮಹಾಪುರಾಣ